ವಿಮಾನಗಳ ಎರಡೂ ಎಂಜಿನ್‌ ವೈಫಲ್ಯ ಆದಾಗ ಸಕ್ರಿಯವಾಗುವ ರ್‍ಯಾಂ ಏರ್‌ ಟರ್ಬೈನ್‌ (ರ್‍ಯಾಟ್‌), ವಿಮಾನ ಪತನದ ವೇಳೆ ಕಾರ್ಯ ನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ.

- ತುರ್ತುಸ್ಥಿತಿಯಲ್ಲಿ ವೇಳೆ ರ್‍ಯಾಟ್‌ ಸಕ್ರಿಯವಾಗಿತ್ತು

- ತಜ್ಞರಿಂದ ವಿಶ್ಲೇಷಣಾ ಮಾಹಿತಿ

ನವದೆಹಲಿ: ಜೂ.12ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ಡ್ರೀಮ್‌ಲೈನರ್‌ ವಿಮಾನ ದುರಂತದ ಕುರಿತು ಒಂದೊಂದೇ ಮಾಹಿತಿ ಬಹಿರಂಗವಾಗುತ್ತಿದೆ. ಇದೀಗ, ವಿಮಾನಗಳ ಎರಡೂ ಎಂಜಿನ್‌ ವೈಫಲ್ಯ ಆದಾಗ ಸಕ್ರಿಯವಾಗುವ ರ್‍ಯಾಂ ಏರ್‌ ಟರ್ಬೈನ್‌ (ರ್‍ಯಾಟ್‌), ವಿಮಾನ ಪತನದ ವೇಳೆ ಕಾರ್ಯ ನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ. ಈ ಮೂಲಕ, ಆ ವಿಮಾನದಲ್ಲಿ ಎರಡೂ ಎಂಜಿನ್‌ ವೈಫಲ್ಯವಾಗಿತ್ತು ಎಂಬುದಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಿದೆ.

ವಿಮಾನವು ಕಟ್ಟಡಕ್ಕೆ ಅಪ್ಪಳಿಸಿ ಸ್ಫೋಟಗೊಳ್ಳುವ ವಿಡಿಯೋದಲ್ಲಿ, ಅದರ ಎಂಜಿನ್‌ಗಳ ಸದ್ದಿನ ಬದಲು ರ್‍ಯಾಟ್‌ನಿಂದ ಬರುತ್ತಿದ್ದ ತೀಕ್ಷ್ಣ ಶಬ್ದ ಕೇಳಿಸುತ್ತಿತ್ತು. ಜತೆಗೆ ರ್‍ಯಾಟ್‌ ಉಪಕರಣವು ತಾನಿದ್ದ ಜಾಗದಿಂದ ನಿಯೋಜನೆಗೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು ಎಂದು ತಜ್ಞರು ಹೇಳಿದ್ದಾರೆ. ಆದರೆ ರ್‍ಯಾಟ್‌ ಕೆಲಸ ಮಾಡಿದ್ದರೂ ವಿಮಾನ ಏಕೆ ಪತನವಾಯಿತು ಎಂಬುದು ಗೊತ್ತಾಗಿಲ್ಲ.

ಏನಿದು ರ್‍ಯಾಟ್‌?:

ರ್‍ಯಾಂ ಏರ್‌ ಟರ್ಬೈನ್‌(ರ್‍ಯಾಟ್‌) ಎಂಬುದು ಗಾಳಿಯ ವೇಗದಿಂದ ಕೆಲಸ ಮಾಡುವ ಟರ್ಬೈನ್‌ ಆಗಿದ್ದು, ವಿಮಾನದ ಎರಡೂ ಎಂಜಿನ್‌ಗಳು ವಿಫಲವಾದಾಗ ತಾನಾಗಿಯೇ ಸಕ್ರಿಯಗೊಳ್ಳುತ್ತದೆ. 

ಇದು ಎಂಜಿನ್‌ ವೈಫಲ್ಯದ ವೇಳೆ ವಿಮಾನಕ್ಕೆ ಪವರ್‌ ನೀಡಿ ವಿಮಾನದ ವಿಮಾನ ನಿಯಂತ್ರಣ, ಸಂಚಾರ ಮತ್ತು ಸಂವಹನದಂತಹ ನಿರ್ಣಾಯಕ ವ್ಯವಸ್ಥೆಗಳು ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ. ವಿಮಾನ ಚಲಿಸುವಾಗ ಬೀಸುವ ಗಾಳಿ ವೇಗವನ್ನು ಬಳಸಿಕೊಂಡು ತಿರುಗಿ ಇದು ಶಕ್ತಿಯನ್ನು ಉತ್ಪಾದಿಸುತ್ತದೆ. ರ್‍ಯಾಟ್‌ ಉಪಕರಣವು ಫ್ಯುಸೆಲೇಜ್‌ (ಯಾಣಿಕರು, ಪೈಲಟ್‌ಗಳಿರುವ ವಿಮಾನದ ಮಧ್ಯದ ಭಾಗ)ನ ಮುಂಭಾಗದ ಬಲಬದಿಯಲ್ಲಿ, ಅಡಿಯಲ್ಲಿ, ರೆಕ್ಕೆಗಳ ಬುಡದಲ್ಲಿ ಇರುತ್ತದೆ.