ಅ.9ರಂದು ಇಹಲೋಕ ತ್ಯಜಿಸಿದ ದೇಶದ ಪ್ರಸಿದ್ಧ ಉದ್ಯಮಿ ರತನ್‌ ಟಾಟಾ ಅವರಿಗೆ ವಿಚಿತ್ರ ಹವ್ಯಾಸ

| Published : Oct 28 2024, 12:55 AM IST / Updated: Oct 28 2024, 04:39 AM IST

Ratan Tata

ಸಾರಾಂಶ

ಅ.9ರಂದು ಇಹಲೋಕ ತ್ಯಜಿಸಿದ ದೇಶದ ಪ್ರಸಿದ್ಧ ಉದ್ಯಮಿ ರತನ್‌ ಟಾಟಾ ಅವರಿಗೆ ವಿಚಿತ್ರ ಹವ್ಯಾಸವೊಂದು ಇತ್ತು. ಸ್ವತಃ ಪೈಲಟ್‌ ಆಗಿದ್ದ ಟಾಟಾ ಅವರು ವಿಮಾನ ಆಗಸದಲ್ಲಿರುವಾಗ ಅದರ ಎಂಜಿನ್‌ ಆಫ್‌ ಮಾಡಿಬಿಡುತ್ತಿದ್ದರು.

ನವದೆಹಲಿ: ಅ.9ರಂದು ಇಹಲೋಕ ತ್ಯಜಿಸಿದ ದೇಶದ ಪ್ರಸಿದ್ಧ ಉದ್ಯಮಿ ರತನ್‌ ಟಾಟಾ ಅವರಿಗೆ ವಿಚಿತ್ರ ಹವ್ಯಾಸವೊಂದು ಇತ್ತು. ಸ್ವತಃ ಪೈಲಟ್‌ ಆಗಿದ್ದ ಟಾಟಾ ಅವರು ವಿಮಾನ ಆಗಸದಲ್ಲಿರುವಾಗ ಅದರ ಎಂಜಿನ್‌ ಆಫ್‌ ಮಾಡಿಬಿಡುತ್ತಿದ್ದರು. ಈ ಮೂಲಕ ತಾವು ವಿಮಾನ ಹಾರಾಟ ನಡೆಸುವುದನ್ನು ನೋಡಲು ಜತೆಯಾದವರಿಗೆ ಭೀತಿ ಹುಟ್ಟಿಸುತ್ತಿದ್ದರು!

ರತನ್‌ ಟಾಟಾ ಅವರ ಜೀವನ ಕುರಿತು ಥಾಮಸ್‌ ಮ್ಯಾಥ್ಯೂ ಅವರು ಬರೆದಿರುವ ಹಾಗೂ ಹಾರ್ಪರ್‌ ಕಾಲಿನ್ಸ್‌ ಪ್ರಕಾಶನ ಸಂಸ್ಥೆ ಹೊರತಂದಿರುವ ‘ರತನ್‌ ಟಾಟಾ ಎ ಲೈಫ್‌’ ಎಂಬ ಪುಸ್ತಕದಲ್ಲಿ ಈ ಕುತೂಹಲಕರ ಮಾಹಿತಿ ಇದೆ.

ರತನ್‌ ಟಾಟಾ ಅವರ ಭಯಾನಕ ಹಾರಾಟ ಕೌಶಲ್ಯದ ಬಗ್ಗೆ ಹಲವಾರು ಕತೆಗಳು ಇವೆ. ವಿಮಾನವನ್ನು ಆಗಸದಲ್ಲಿ ಹಾರಾಡಿಸುತ್ತಾ ಖುಷಿ ಪಡುತ್ತಿದ್ದ ಟಾಟಾ, ದಿಢೀರನೆ ಅದರ ಎಂಜಿನ್‌ ಆಫ್‌ ಮಾಡಿ ಜತೆಗಾರರಿಗೆ ಆತಂಕ ಹುಟ್ಟಿಸುತ್ತಿದ್ದರು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ಅಮೆರಿಕದ ಕಾರ್ನೆಲ್‌ ವಿಶ್ವವಿದ್ಯಾಲಯದಲ್ಲಿ 1960ನೇ ಇಸ್ವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ವಿಮಾನ ಹಾರಾಟ ಕಲಿತಿದ್ದ ಅವರು, ಪೈಲಟ್‌ ಲೈಸೆನ್ಸ್‌ ಕೂಡ ಪಡೆದುಕೊಂಡಿದ್ದರು. ಅಮೆರಿಕದಲ್ಲಿದ್ದಾಗ ಸಣ್ಣ ವಿಮಾನಗಳನ್ನು ಚಾಲನೆ ಮಾಡುತ್ತಿದ್ದರು. 2007ರಲ್ಲಿ ಬೆಂಗಳೂರಿನಲ್ಲಿ ನಡೆದ ಏರ್‌ ಶೋ ವೇಳೆ ಸಹಪೈಲಟ್‌ ಆಗಿ ಎಫ್‌-16 ಯುದ್ಧ ವಿಮಾನ ಚಾಲನೆ ಮಾಡಿದ್ದರು. ಆಗ ಅವರಿಗೆ 69 ವರ್ಷ. ಬೆಂಗಳೂರಿನ ಏರ್‌ಶೋಗೆ ಅವರು ನಿಯಮಿತವಾಗಿ ಭೇಟಿ ಕೊಡುತ್ತಿದ್ದರು.

ಬಾಸ್‌ ಹುದ್ದೆಗೆ ಮಲ ಸೋದರನನ್ನೂ ಸಂದರ್ಶನಕ್ಕೆ ಒಳಪಡಿಸಿದ್ದರು ರತನ್‌!

 ನವದೆಹಲಿ : 2011ರ ಮಾರ್ಚ್‌ನಲ್ಲಿ ಟಾಟಾ ಸಮೂಹ ಕಂಪನಿಯ ಮುಖ್ಯಸ್ಥ ಹುದ್ದೆಯಿಂದ ರತನ್‌ ಟಾಟಾ ಅವರು ನಿವೃತ್ತಿ ಬಯಸಿದಾಗ ಆ ಸ್ಥಾನ ಸಹಜವಾಗಿಯೇ ಅವರ ಮಲ ಸೋದರ ನೋಯೆಲ್‌ ಟಾಟಾ ಅವರ ಪಾಲಾಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ರತನ್‌ ಟಾಟಾ ಅದಕ್ಕೆ ಒಪ್ಪಿರಲಿಲ್ಲ. ಅರ್ಹರನ್ನು ಆಯ್ಕೆ ಮಾಡಲು ಸಮಿತಿಯೊಂದನ್ನು ರಚನೆ ಮಾಡಿದ್ದರು. ಅದರಿಂದ ಅವರು ದೂರವೇ ಉಳಿದಿದ್ದರು. ಈ ಸಮಿತಿ ಮುಂದೆ ನೋಯೆಲ್‌ ಟಾಟಾ ಕೂಡ ಇತರರಂತೆ ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ ಅವರಿಗೆ ಹುದ್ದೆ ಸಿಕ್ಕಿರಲಿಲ್ಲ. ಸೈರಸ್‌ ಮಿಸ್ತ್ರಿ ಅವರಿಗೆ ಆ ಸ್ಥಾನ ದೊರೆತಿತ್ತು.

ಆ ವೇಳೆ, ಅವರು ತಮ್ಮ ಮಲ ಸೋದರ ನೋಯೆಲ್‌ಗೆ ಟಾಟಾ ಸಮೂಹದಂತಹ ಕಠಿಣ ಹುದ್ದೆ ನಿರ್ವಹಿಸುವ ಅನುಭವ ಕಡಿಮೆ ಇದೆ ಎಂದು ಹೇಳಿದ್ದರು. ತಮಗೇನಾದರೂ ಮಗ ಇದ್ದಿದ್ದರೂ ಆತ ಸ್ವಯಂಚಾಲಿತವಾಗಿ ಉತ್ತರಾಧಿಕಾರಿಯಾಗಲು ಅವಕಾಶ ನೀಡುತ್ತಿರಲಿಲ್ಲ ಎಂದು ಟಾಟಾ ತಿಳಿಸಿದ್ದರು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.