ಸಾರಾಂಶ
ರತನ್ ಟಾಟಾ ಮುತುವರ್ಜಿ ವಹಿಸಿ ಏರ್ ಇಂಡಿಯಾ ಖರೀದಿಗೆ ಮುಂದಾದರು. 18000 ಕೋಟಿ ರು.ನಗದು ಪಾವತಿ ಮತ್ತು 15300 ಕೋಟಿ ರು. ಸಾಲ ಪಾವತಿ ಹೊಣೆ ವಹಿಸಿಕೊಂಡು ಏರ್ ಇಂಡಿಯಾವನ್ನು ಮರಳಿ ಟಾಟಾ ಸಮೂಹದ ವಶಕ್ಕೆ ಒಪ್ಪಿಸಿದರು.
ಭಾರತದ ಮೊಟ್ಟ ಮೊದಲ ವಿಮಾನಯಾನ ಕಂಪನಿ ಟಾಟಾ ಏರ್ ಸರ್ವೀಸ್ ಹೆಸರಲ್ಲಿ 1932ರಲ್ಲಿ ಆರಂಭವಾಗಿತ್ತು. ಇದನ್ನು ಪ್ರಾರಂಭಿಸಿದ್ದು ರತನ್ ಟಾಟಾ ಅವರ ದತ್ತು ತಂದೆ ಜೆ.ಆರ್.ಡಿ.ಟಾಟಾ. ಸಂಸ್ಥೆ ಮೊದಲ ವರ್ಷ ಎರಡು ಪುಟ್ಟ ಡಿ ಹ್ಯಾವಿಲ್ಯಾಂಡ್ ಪಸ್ ಮೋತ್ ಎಂಬ ಚಿಕ್ಕ ವಿಮಾನಗಳ ಮೂಲಕ ಪತ್ರಗಳ ರವಾನೆಯನ್ನು ಆರಂಭಿಸಿತು. ಬಳಿಕ ಅದೇ ವರ್ಷ ಇಂಪೀರಿಯಲ್ ಏರ್‌ವೇಸ್ ಸಂಸ್ಥೆ ಗುತ್ತಿಗೆ ಪಡೆದು, ಕರಾಚಿಯಿಂದ ಅಹಮದಾಬಾದ್, ಬಾಂಬೆ (ಇಂದಿನ ಮುಂಬೈ) ಮಾರ್ಗವಾಗಿ ಮದ್ರಾಸ್ (ಇಂದಿನ ಚೆನ್ನೈ) ವರೆಗೆ ಲಗೇಜು ಸಾಗಾಣಿಕೆ ಆರಂಭಿಸಿತು.
ಈ ನಡುವೆ 1946ರಲ್ಲಿ ಸರ್ಕಾರ ಏರ್ ಇಂಡಿಯಾ ಸ್ವಾಧೀನಕ್ಕೆ ಮುಂದಾಯ್ತು. ಅದರಂತೆ 1948ರಲ್ಲಿ ಸರ್ಕಾರ ಅಂದಿನ ಸರ್ಕಾರ ಏರ್ ಇಂಡಿಯಾದಲ್ಲಿನ ಶೇ.49ರಷ್ಟು ಪಾಲು ಖರೀದಿ ಮಾಡಿತ್ತು. ಇದಾದ ಬಳಿಕ 1953ರಲ್ಲಿ ಪಂಡಿತ್ ಜವಹಾರ್ ಲಾಲ್ ನೆಹರು ಅವರ ಸರ್ಕಾರ ಏರ್ ಕಾರ್ಪರೇಷನ್ ಕಾಯ್ದೆ ಜಾರಿ ತಂದು ಟಾಟಾದಿಂದ ಸಂಪೂರ್ಣ ಏರ್ ಇಂಡಿಯಾ ಸರ್ಕಾರದ ಅಧೀನಕ್ಕೆ ತೆಗೆದುಕೊಂಡಿತು. ಆದರೆ ಜೆ.ಆರ್.ಡಿ.ಟಾಟಾ ಅವರೇ ಅಧ್ಯಕ್ಷರಾಗಿ ಮುಂದುವರಿದರು. ಈ ಅವಧಿಯಲ್ಲಿ ಏರ್ ಇಂಡಿಯಾ ಸಂಸ್ಥೆಯು ವಿಶ್ವದಲ್ಲಿಯೇ ಅತ್ಯಂತ ಅತ್ಯುನ್ನತ ವಿಮಾನ ಎಂಬ ಹೆಗ್ಗಳಿಕೆ ಗಳಿಸಿತ್ತು. ವಿಶ್ವದ ಮಿಕ್ಕೆಲ್ಲಾ ವಿಮಾನಗಳನ್ನು ಹಿಂದಿಕ್ಕಿ ನಂ.1 ಪಟ್ಟವನ್ನು ಏರ್ ಇಂಡಿಯಾ ತನ್ನದಾಗಿಸಿಕೊಂಡಿತ್ತು. ಬಳಿಕ ಸರ್ಕಾರ ಮತ್ತು ಟಾಟಾ ನಡುವೆ ಮನಸ್ತಾಪವಾಗಿ ಏರ್ ಇಂಡಿಯಾ ಅಧ್ಯಕ್ಷ ಸ್ಥಾನದಿಂದ ಜೆ.ಆರ್.ಡಿ.ಟಾಟಾ ಹಿಂದೆ ಸರಿದರು.ಅಂದಿನಿಂದ ಏರ್ ಇಂಡಿಯಾ ಅವನತಿ ಎಡೆಗೆ ಮುಖ ಮಾಡಿತು. 2011ರ ವೇಳೆಗೆ ₹43000 ಕೋಟಿ ನಷ್ಟ ಅನುಭವಿಸಿತ್ತು. ಕಂಪನಿ ಬಿಳಿಯಾನೆ ಪಟ್ಟ ಹೊತ್ತುಕೊಂಡಿತು. ಏನು ಮಾಡಿದರೂ ಅದರ ಸುಧಾರಣೆ ಸಾಧ್ಯವಾಗಲಿಲ್ಲ. ಹಲವು ಬಾರಿ ಮಾರಾಟಕ್ಕೆ ಇಟ್ಟರೂ ಯಾರೂ ಕಂಪನಿ ಖರೀದಿಗೆ ಮುಂದಾಗಲಿಲ್ಲ.
ಅಂತಿಮವಾಗಿ ಸ್ವತಃ ರತನ್ ಟಾಟಾ ಮುತುವರ್ಜಿ ವಹಿಸಿ ಏರ್ ಇಂಡಿಯಾ ಖರೀದಿಗೆ ಮುಂದಾದರು. 18000 ಕೋಟಿ ರು.ನಗದು ಪಾವತಿ ಮತ್ತು 15300 ಕೋಟಿ ರು. ಸಾಲ ಪಾವತಿ ಹೊಣೆ ವಹಿಸಿಕೊಂಡು ಏರ್ ಇಂಡಿಯಾವನ್ನು ಮರಳಿ ಟಾಟಾ ಸಮೂಹದ ವಶಕ್ಕೆ ಒಪ್ಪಿಸಿದರು.