ಸಾರಾಂಶ
- ಸಾವಿಗೆ ಅನ್ಯ ಕಾರಣಗಳು ಇರಬಹುದು: ಅಧ್ಯಯನ
ನವದೆಹಲಿ: ದೇಶದಲ್ಲಿ ಸಂಭವಿಸುತ್ತಿರುವ 18ರಿಂದ 45 ವಯೋಮಾನದವರ ಹಠಾತ್ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ ಎಂದು ಐಸಿಎಂಆರ್ ಮಂಗಳವಾರ ಹೇಳಿದೆ.ಈ ಕುರಿತಾಗಿ ವೈದ್ಯಕೀಯ ಸಂಶೋಧನಾ ಪತ್ರಿಕೆಯಲ್ಲಿ ವರದಿಯೊಂದನ್ನು ಪ್ರಕಟಿಸಿರುವ ಐಸಿಎಂಆರ್, ‘ಕೋವಿಡ್ ಲಸಿಕೆ ಪಡೆದ ಕಾರಣದಿಂದಲೇ ಭಾರತೀಯ ಯುವಕರಲ್ಲಿ ಹಠಾತ್ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂಬುದಕ್ಕೆ ನಮಗೆ ಯಾವುದೇ ಪುರಾವೆ ದೊರಕಿಲ್ಲ. ಆದರೆ ಇದಕ್ಕೆ ವಿರುದ್ಧವಾಗಿ ಕೋವಿಡ್ ಲಸಿಕೆ ಹಠಾತ್ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದೆ ಎಂಬುದು ತಿಳಿದುಬಂದಿದೆ. ಈ ರೀತಿಯ ಹಠಾತ್ ಸಾವುಗಳಿಗೆ ಕುಟುಂಬದಲ್ಲಿ ಈ ಹಿಂದೆ ಸಂಭವಿಸಿರುವ ಹಠಾತ್ ಸಾವುಗಳು, ಕೋವಿಡ್‌ನಿಂದ ಆಸ್ಪತ್ರೆಗೆ ಸೇರಿದ್ದು ಮತ್ತು ಜೀವನಕ್ರಮದಲ್ಲಾದ ಬದಲಾವಣೆ, ಅತಿಯಾದ ಮದ್ಯಪಾನ, ಕಡಿಮೆಯಾದ ದೈಹಿಕ ವ್ಯಾಯಾಮಗಳು ಕಾರಣವಾಗಿರಬಹುದು’ ಎಂದು ಹೇಳಿದೆ. ದೇಶದಲ್ಲಿರುವ 47 ಆಸ್ಪತ್ರೆಗಳಲ್ಲಿ ಅಧ್ಯಯನ ನಡೆಸಿ ಈ ವರದಿಯನ್ನು ತಯಾರಿಸಲಾಗಿದೆ. 2021ರ ಅ.1ರಿಂದ 2023ರ ಮಾ.31ರೊಳಗೆ ಯಾವುದೇ ಆರೋಗ್ಯ ಸಮಸ್ಯೆಯಿಲ್ಲದೇ ಇದ್ದಕ್ಕಿದ್ದಂತೆ ಮೃತಪಟ್ಟ ಯುವಕರ ಸಂಖ್ಯೆ ಹೆಚ್ಚಾದ ಕಾರಣ ಇದಕ್ಕೆ ಕೋವಿಡ್ ಲಸಿಕೆ ಕಾರಣ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಐಸಿಎಂಆರ್ ಸಂಶೋಧನೆ ಕೈಗೊಂಡಿತ್ತು.