ಇಂದು ಬೆಳಗ್ಗೆ 11ಕ್ಕೆ ನಿರ್ಮಲಾ ಸೀತಾರಾಮನ್‌ 8ನೇ ಕೇಂದ್ರ ಬಹುನಿರೀಕ್ಷೆಯ ಬಜೆಟ್‌ ಮಂಡನೆ

| N/A | Published : Feb 01 2025, 01:32 AM IST / Updated: Feb 01 2025, 04:52 AM IST

ಸಾರಾಂಶ

  ಕೇಂದ್ರ ಸರ್ಕಾರದ ಬಹುನಿರೀಕ್ಷೆಯ ಬಜೆಟ್‌ ಫೆ.1ರ ಶನಿವಾರ ಪ್ರಕಟವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡಿಸಲಿದ್ದು, ಇದರೊಂದಿಗೆ ಸತತ 8 ಬಜೆಟ್‌ ದಾಖಲಿಸಿದ ಮೊದಲ ಸಚಿವೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ನವದೆಹಲಿ: 140 ಕೋಟಿ ಭಾರತೀಯರ ಕನಸುಗಳನ್ನು ಈಡೇರಿಸುವ ಹಂಬಲ ಹೊತ್ತಿರುವ ಕೇಂದ್ರ ಸರ್ಕಾರದ ಬಹುನಿರೀಕ್ಷೆಯ ಬಜೆಟ್‌ ಫೆ.1ರ ಶನಿವಾರ ಪ್ರಕಟವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡಿಸಲಿದ್ದು, ಇದರೊಂದಿಗೆ ಸತತ 8 ಬಜೆಟ್‌ ದಾಖಲಿಸಿದ ಮೊದಲ ಸಚಿವೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಈ ಬಾರಿಯ ಬಜೆಟ್‌ ಕುರಿತು ವಿವಿಧ ವಲಯಗಳು ನಾನಾ ನಿರೀಕ್ಷೆ ಇಟ್ಟುಕೊಂಡಿವೆಯಾದರೂ, ಬಜೆಟ್‌ನ ಪ್ರಮುಖ ಗುರಿ ಮಹಿಳೆಯರು, ಬಡವರು ಮತ್ತು ಮಧ್ಯಮ ವರ್ಗದ ಸಬಲೀಕರಣದ್ದಾಗಿರುವ ಸಾಧ್ಯತೆ ಇದೆ. ಈ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸುಳಿವು ನೀಡಿದ್ದಾರೆ.

ಹಣದುಬ್ಬರ ಹೊಡೆತಕ್ಕೆ ಸಿಕ್ಕಿರುವ ಮಧ್ಯಮ ವರ್ಗವನ್ನು ರಕ್ಷಿಸುವ ಸಲುವಾಗಿ ತೆರಿಗೆ ದರ ಕಡಿತ ಅಥವಾ ತೆರಿಗೆ ಸ್ತರದಲ್ಲಿ ಬದಲಾವಣೆ ಸಾಧ್ಯತೆ ದಟ್ಟವಾಗಿದೆ. ಇನ್ನೊಂದೆಡೆ ಜಾಗತಿಕ ಪರಿಸ್ಥಿತಿಗಳ ಪರಿಣಾಮ ದೇಶದ ಆರ್ಥಿಕತೆಗೆ ಮಂದಗತಿಯ ಸ್ಪರ್ಶವಾಗಿರುವ ಹಿನ್ನೆಲೆ ಆರ್ಥಿಕ ಚಟುವಟಿಕೆ ಉತ್ತೇಜನಕ್ಕೆ ಪ್ರೋತ್ಸಾಹಕಗಳು ಮತ್ತು ಜನರ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಲವೊಂದು ಕ್ರಮಗಳನ್ನು ಸರ್ಕಾರ ಘೋಷಿಸುವ ಸಾಧ್ಯತೆ ಇದೆ. ಆದರೆ ವಿತ್ತೀಯ ಶಿಸ್ತನ್ನು ಕಾಪಾಡುವ ಗುರಿಯನ್ನೂ ಸರ್ಕಾರ ಹಾಕಿಕೊಂಡಿರುವ ಕಾರಣ, ಸರ್ಕಾರ ಎರಡರ ನಡುವೆ ಹೇಗೆ ಸಮತೋಲನ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮೋದಿ ಸುಳಿವು:

ಶುಕ್ರವಾರ ಸಂಸತ್ತಿನ ಬಜೆಟ್‌ ಅಧಿವೇಶನಕ್ಕೂ ಮುನ್ನ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಬಡವರು ಹಾಗೂ ಮಧ್ಯಮ ವರ್ಗದವರ ಮೇಲೆ ಕೃಪೆ ತೋರುವಂತೆ ಲಕ್ಷ್ಮೀ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ. ಮಹಿಳೆಯರಿಗೆ ಸಮಾನ ಅವಕಾಶ ಲಭಿಸುವಂತೆ ಅವರ ಸಶಕ್ತೀಕರಣಕ್ಕೆ ಅಗತ್ಯವಾದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಹಾಗೂ ತಾರತಮ್ಯಗಳನ್ನು ತೊಡೆದುಹಾಕಲಾಗುವುದು’ ಎಂದರು.

ಈ ಬಾರಿಯ ಬಜೆಟ್ ‘ವಿಕಸಿತ ಭಾರತ’ದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಹೊಸ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ತುಂಬುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಮೋದಿ, ಅಧಿವೇಶನದ ವೇಳೆ ಹಲವು ಐತಿಹಾಸಿಕ ಬಿಲ್‌ಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.ಬಡವರಿಗೆ ವಸತಿ, ಆರೋಗ್ಯ, ಜೀವನೋಪಾಯಕ್ಕೆ ಹೊಸ ಯೋಜನೆ ನಿರೀಕ್ಷೆಆಟೊಮೊಬೈಲ್‌, ಶಕ್ತಿ, ರಕ್ಷಣೆ, ರೈಲ್ವೆ, ರಿಯಲ್ ಎಸ್ಟೇಟ್‌ ಕ್ಷೇತ್ರಗಳತ್ತ ಗಮನನವೀಕರಿಸಬಹುದಾದ ಹಸಿರು ಇಂಧನಕ್ಕೆ ಅಧಿಕ ಆದ್ಯತೆ ನೀಡುವ ಸಂಭವಕೃಷಿ ಕ್ಷೇತ್ರದ ಅಭಿವೃದ್ಧಿಗೆ 1.7 ಲಕ್ಷ ಕೋಟಿ ರು.ಗೆ ನಿಧಿ ಮೀಸಲು ಸಾಧ್ಯತೆ 

- ಆದಾಯ ತೆರಿಗೆ ಸ್ಲ್ಯಾಬ್‌ ಬದಲಾವಣೆ ಆಗುತ್ತಾ? ಕುತೂಹಲಸ್ತ್ರೀಯರು, ಬಡವರು, ಮಧ್ಯಮ ವರ್ಗ ಪರ ಬಜೆಟ್‌: ಮೋದಿ

ಬಜೆಟ್‌ ನಿರೀಕ್ಷೆಗಳು

- ಕನಿಷ್ಠ ಆದಾಯ ತೆರಿಗೆ ವಿನಾಯ್ತಿ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ

- ಶೇ.30ರಷ್ಟು ತೆರಿಗೆ ಸ್ಲ್ಯಾಬ್‌ನ ಆದಾಯ ಮಿತಿ 15 ಲಕ್ಷದಿಂದ 20 ಲಕ್ಷಕ್ಕೆ

- ಆದಾಯ ತೆರಿಗೆ ಕಾಯ್ದೆ ಸರಳೀಕರಣಕ್ಕೆ ನೇರ ತೆರಿಗೆ ಕೋಡ್ ಪರಿಚಯ

- ಹೊಸ ತೆರಿಗೆ ಪದ್ಧತಿಯಡಿ ಸರಳೀಕೃತ 3 ಹಂತದ ತೆರಿಗೆ ವ್ಯವಸ್ಥೆ ನಿರೀಕ್ಷೆ

- ಗೃಹ ಸಾಲಗಳಿಗೆ ವಿಧಿಸಲಾಗುವ ತೆರಿಗೆಯ ವಿನಾಯಿತಿ ಮಿತಿಯಲ್ಲಿ ಹೆಚ್ಚಳ

- ಮಹಿಳಾ ಕೇಂದ್ರಿತ ಅಭಿವೃದ್ಧಿ ಯೋಜನೆಗೆ ಉತ್ತೇಜನ, ಹೊಸ ಸ್ಕೀಂ ಪ್ರಕಟ

ರಾಜ್ಯದ ಬೇಡಿಕೆಗಳು- ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಎಂದು ಘೋಷಿಸಿ, 5300 ಕೋಟಿ ರು. ಬಿಡುಗಡೆ ಮಾಡಬೇಕು- ಪಶ್ಚಿಮಘಟ್ಟ ಅಭಿವೃದ್ಧಿಗೆ 5 ವರ್ಷದಲ್ಲಿ 10,000 ಕೋಟಿ, ಕಲ್ಯಾಣ ಕರ್ನಾಟಕಕ್ಕೆ 5,000 ಕೋಟಿ ರು. ನೀಡಬೇಕು- 15ನೇ ಹಣಕಾಸು ಆಯೋಗದ ಶಿಫಾರಸು ಮಾಡಿರುವ 11,495 ಕೋಟಿ ರು. ಹಣವನ್ನು ಬಿಡುಗಡೆ ಮಾಡಬೇಕು- ಈಗಾಗಲೇ ಹೆಚ್ಚಳ ಮಾಡಿರುವ ಸೆಸ್ ಮತ್ತು ಸರ್ಚಾರ್ಜ್‌ಗಳಲ್ಲಿ ರಾಜ್ಯಕ್ಕೂ ಕೇಂದ್ರ ಸರ್ಕಾರ ಪಾಲು ನೀಡಬೇಕು