ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲಿನ ಚೇಳು : ತರೂರ್‌ ವಿರುದ್ಧದ ಮಾನಹಾನಿ ದಾವೆಗೆ ಸುಪ್ರೀಂ ತಡೆ

| Published : Sep 11 2024, 01:11 AM IST / Updated: Sep 11 2024, 05:26 AM IST

ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲಿನ ಚೇಳು : ತರೂರ್‌ ವಿರುದ್ಧದ ಮಾನಹಾನಿ ದಾವೆಗೆ ಸುಪ್ರೀಂ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲಿನ ಚೇಳು ಇದ್ದಂತೆ ಎಂದು ಆರೆಸ್ಸೆಸ್‌ ನಾಯಕರೊಬ್ಬರು ಹೇಳಿದ್ದರು’ ಎಂದು 2018ರಲ್ಲಿ ಹೇಳಿ ವಿವಾದ ಎಬ್ಬಿಸಿದ್ದ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ವಿರುದ್ಧದ ಮಾನಹಾನಿ ದಾವೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲಿನ ಚೇಳು ಇದ್ದಂತೆ ಎಂದು ಆರೆಸ್ಸೆಸ್‌ ನಾಯಕರೊಬ್ಬರು ಹೇಳಿದ್ದರು’ ಎಂದು 2018ರಲ್ಲಿ ಹೇಳಿ ವಿವಾದ ಎಬ್ಬಿಸಿದ್ದ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ವಿರುದ್ಧದ ಮಾನಹಾನಿ ದಾವೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ತರೂರ್‌ ಹೇಳಿಕೆಯಿಂದ ಶಿವಭಕ್ತರ ಧಾರ್ಮಿಕ ಭಾವನೆಗೆ ಮಾನಹಾನಿಯಾಗಿದೆ ಎಂದು ಬಿಜೆಪಿಗ ರಾಜೀವ್‌ ಬಬ್ಬರ್‌ ದಾವೆ ಹೂಡಿದ್ದರು. ಹೀಗಾಗಿ ದಿಲ್ಲಿ ಹೈಕೋರ್ಟು ಸೆ.10ರಂದು ವಿಚಾರಣೆಗೆ ಬರಲು ಎರಡೂ ಕಡೆಯವರಿಗೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ, ತರೂರ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ವಿಚಾರಣೆಗೆ ತಡೆ ನೀಡಿದೆ. ಜೊತೆಗೆ ದಿಲ್ಲಿ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್‌ ನೀಡಿದೆ.

===

ಸಂಘರ್ಷಕ್ಕೆ ಇಳಿದಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಜು ಶೀಘ್ರ ಭಾರತಕ್ಕೆ

ಮಾಲೆ: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅಧಿಕೃತ ಭೇಟಿಗಾಗಿ ಭಾರತಕ್ಕೆ ‘ಅತಿ ಶೀಘ್ರದಲ್ಲಿ’ ಪ್ರಯಾಣಿಸಲಿದ್ದಾರೆ ಎಂದು ಅವರ ವಕ್ತಾರರು ಇಂದು ತಿಳಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗಾಗಿ ಜನವರಿಯಲ್ಲಿ ಇಬ್ಬರು ಸಚಿವರನ್ನು ಅಮಾನತು ಮಾಡಲಾಗಿತ್ತು. ಅವರು ಮಂಗಳವಾರ ಸರ್ಕಾರಕ್ಕೆ ರಾಜೀನಾಮೆ ನೀಡಿದರು. ಅದರ ಬೆನ್ನಲ್ಲೇ ಮಾತನಾಡಿದ ಅಧ್ಯಕ್ಷರ ಕಚೇರಿಯ ಮುಖ್ಯ ವಕ್ತಾರೆ ಹೀನಾ ವಲೀದ್ ಮುಯಿಜು ಭಾರತ ಭೇಟಿ ಬಗ್ಗೆ ಘೋಷಿಸಿದರು.

ಭೇಟಿಯ ನಿಖರವಾದ ದಿನಾಂಕವನ್ನು ಇನ್ನೂ ಅಂತಿಮಗೊಳಿಸದಿದ್ದರೂ, ಎರಡೂ ಕಡೆಯವರು ದಿನಾಂಕದ ಬಗ್ಗೆ ಚರ್ಚಿಸುತ್ತಿದ್ದಾರೆ. ಇದು ಎರಡೂ ದೇಶಗಳ ನಾಯಕರಿಗೆ ಅನುಕೂಲಕರವಾಗಿದೆ ಎಂದು ವರದಿಯೊಂದು ಹೇಳಿದೆ.

===

ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಸ್ಥಿತಿ ಗಂಭೀರ

ನವದೆಹಲಿ: ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇಲ್ಲಿನ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಯೆಚೂರಿ ಅವರು ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಏಮ್ಸ್‌ನ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ. ವೈದ್ಯರ ತಂಡವು ಯೆಚೂರಿ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಪಕ್ಷವು ಹೇಳಿದೆ.

ನ್ಯುಮೋನಿಯಾ ತರಹದ ಎದೆ ಸೋಂಕಿನ ಚಿಕಿತ್ಸೆಗಾಗಿ ಯೆಚೂರಿ ಅವರನ್ನು ಆ.19 ರಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಗೆ ದಾಖಲಿಸಲಾಗಿತ್ತು.

====

ವಾಹನಗಳ ಮಾಲಿನ್ಯ ಪ್ರಮಾಣದ ಮೇಲೆ ಸ್ಕ್ರಾಪಿಂಗ್‌: ಕೇಂದ್ರ

ನವದೆಹಲಿ: ‘ಕೇಂದ್ರ ಸರ್ಕಾರ ವಾಹನಗಳ ಮಾಲಿನ್ಯ ಪ್ರಮಾಣ ಆಧಾರದ ಮೇಲೂ ಗುಜರಿ ನೀತಿಯನ್ನು ರೂಪಿಸುತ್ತಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ಮಂಗಳವಾರ ಮಾತನಾಡಿದ ಇಲಾಖೆಯ ಕಾರ್ಯದರ್ಶಿ ಅನುರಾಗ್‌ ಜೈನ್‌, ‘15 ವರ್ಷದಷ್ಟು ಹಳೆಯದಾದ ವಾಹನಗಳನ್ನು ಗುಜರಿಗೆ ಹಾಕುವ ನೀತಿಯನ್ನು ಹಲವರು ಪ್ರಶ್ನಿಸಿದ್ದಾರೆ. ‘ನಮ್ಮ ವಾಹನ ಇನ್ನೂ ಚೆನ್ನಾಗಿದೆ. ನಾವೇಕೆ ಗುಜರಿಗೆ ಹಾಕಬೇಕು?’ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ವಾಹನಗಳ ಮಾಲಿನ್ಯ ಪರೀಕ್ಷೆಗೆ ಒಳಪಡಿಸಿ, ಅವುಗಳ ಫಿಟ್ನೆಸ್‌ ಆಧಾರದ ಮೇಲೆ ಸ್ಕ್ರಾಪಿಂಗ್‌ ನೀತಿ ರೂಪಿಸಲಾಗುತ್ತಿದೆ’ ಎಂದರು.

ಜೊತೆಗೆ, ಗುಜರಿ ನೀತಿ ಪಾಲಿಸಿದವರು ಹೊಸ ವಾಹನ ಖರೀದಿಸಿದರೆ ಆಟೋಮೊಬೈಲ್‌ ಕಂಪನಿಗಳು ಶೇ.3 ರಿಯಾಯ್ತಿ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

==

ಟ್ಯೂಷನ್, ಕೋಚಿಂಗ್‌ ಕ್ಲಾಸ್‌ಗಳ ವಿರುದ್ಧ ಇನ್ಫಿ ಮೂರ್ತಿ ಆಕ್ರೋಶ

ನವದೆಹಲಿ: ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ಅವರು ಕೋಚಿಂಗ್ ತರಗತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಕೋಚಿಂಗ್ ತರಗತಿಗಳು ಪರಿಣಾಮಕಾರಿ ವಿಧಾನವಲ್ಲ. ತಮ್ಮ ನಿಯಮಿತ ಶಾಲಾ ತರಗತಿಗಳಲ್ಲಿ ತೊಡಗಿಸಿಕೊಳ್ಳಲು ವಿಫಲರಾದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಈ ಬಾಹ್ಯ ತರಗತಿಗಳ ಮೇಲೆ ಅವಲಂಬಿತರಾಗುತ್ತಾರೆ ಎಂದರು. ‘ಕೋಚಿಂಗ್ ತರಗತಿಗಳು ಮಕ್ಕಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡುವ ತಪ್ಪು ಮಾರ್ಗವಾಗಿದೆ’ ಎಂದೂ ನುಡಿದರು.