ಸಾರಾಂಶ
ನವದೆಹಲಿ: ಹೆಚ್ಚಾಗಿ ಸೊಪ್ಪು ಸೇವಿಸುವ ಅಥವಾ ಸಸ್ಯಾಹಾರಿ ಜನರಿಗೆ ಕೋವಿಡ್ ಸೋಂಕು ತಗುಲುವ ಸಾಧ್ಯತೆ ಶೇ.39ರಷ್ಟು ಕಡಿಮೆ ಇರಲಿದೆ. ಇಂತಹ ಜನರಿಗೆ ಹೋಲಿಸಿದರೆ ಒಂದು ವಾರದಲ್ಲಿ ಸುಮಾರು ಮೂರು ಬಾರಿ ಮಾಂಸಾಹಾರ ಸೇವಿಸುವ ಜನರು ಕೋವಿಡ್‌ಗೆ ತುತ್ತಾಗುವ ಸಂಭವ ಹೆಚ್ಚಾಗಿರಲಿದೆ ಎಂಬ ಮಾಹಿತಿಯನ್ನು ಸಂಶೋಧನಾ ವರದಿಯೊಂದು ನೀಡಿದೆ.
‘ಬ್ರಿಟಿಷ್ ಮೆಡಿಕಲ್ ಜರ್ನಲ್ ನ್ಯೂಟ್ರಿಷನ್ ಪ್ರಿವೆನ್ಶನ್ ಆ್ಯಂಡ್ ಹೆಲ್ತ್’ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಸಸ್ಯ ಆಧಾರಿತ ಆಹಾರಗಳು ಮಾನವನ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ವೈರಲ್ ಸೋಂಕಿನ ವಿರುದ್ಧ ಹೋರಾಡಲು ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತವೆ.
ಆದರೆ ಇತರ ತರಕಾರಿ, ದ್ವಿದಳ ಧಾನ್ಯಗಳು, ಬೀಜಗಳು, ಡೈರಿ ಉತ್ಪನ್ನ ಮತ್ತು ಮಾಂಸಾಹಾರದಲ್ಲಿ ಈ ಪ್ರಮಾಣ ಕಡಿಮೆ ಇದೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.
ಅದಾಗ್ಯೂ ಇದು ವೈಯಕ್ತಿಕ ಅಂಶಗಳ ಮೇಲೂ ಅವಲಂಬಿತವಾಗಿರುತ್ತದೆ ಎಂಬುದು ವರದಿಯ ಮತ್ತೊಂದು ಮುಖ್ಯಾಂಶ. ಒಟ್ಟು 700ಕ್ಕೂ ಹೆಚ್ಚು ವಯಸ್ಕರ ಮೇಲೆ ನಡೆಸಿದ ಸಂಶೋಧನೆಯಲ್ಲಿ ಶೇ.52ರಷ್ಟು ಮಿಶ್ರಹಾರಿಗಳಲ್ಲಿ ಶೇ.18ರಷ್ಟು ಜನರು ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೇ ಶೇ.40ರಷ್ಟು ಸಸ್ಯಾಹಾರಿಗಳಲ್ಲಿ ಕೇವಲ ಶೇ.11ರಷ್ಟು ಜನ ಮಾತ್ರ ಸೋಂಕಿಗೆ ಒಳಗೊಂಡಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.