ಸಾರಾಂಶ
ಪ್ರಯಾಗರಾಜ್: ಕುಂಭಮೇಳದಲ್ಲಿ ಕಿನ್ನರ ಅಖಾಡದಲ್ಲಿ ಸನ್ಯಾಸತ್ವ ಸ್ವೀಕರಿಸಿ ಮಹಾಮಂಡಲೇಶ್ವರರಾಗಿದ್ದ ಮಾಜಿ ನಟಿ ಮಮತಾ ಕುಲಕರ್ಣಿ ಅವರ ರಾಜೀನಾಮೆಯನ್ನು ಅಖಾಡ ತಿರಸ್ಕರಿಸಿದೆ. ಹೀಗಾಗಿ ಅವರು ಪಟ್ಟದಲ್ಲಿ ಮುಂದುವರಿಯಲಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿರುವ ಮಮತಾ, ‘ನಾನು ಸಲ್ಲಿಸಿದ್ದ ರಾಜೀನಾಮೆಯನ್ನು ಆಚಾರ್ಯ ಲಕ್ಷ್ಮೀ ನಾರಾಯಣ ತ್ರಿಪಾಠಿ ಅವರು ತಿರಸ್ಕರಿಸಿದ್ದಾರೆ. ಅವರು ನನ್ನನ್ನು ಉಳಿಸಿಕೊಂಡಿದ್ದಾರೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಜ.24ರಂದು ಮಮತಾ ಅವರು ಸಾಂಸಾರಿಕ ಜೀವನ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದರು. ಇವರು ದೇಶದ್ರೋಹ ಎದುರಿಸುತ್ತಿದ್ದು ಸೇರ್ಪಡೆಯು ನಿಯಮ ಬಾಹಿರ ಎಂದು ಅಖಾಡದ ಸ್ವಯಂಘೋಷಿತ ಸ್ಥಾಪಕ ರಿಷಿ ಅಜಯ್ ದಾಸ್ ಅವರು ತಿರಸ್ಕರಿಸಿದ್ದರು. ಅದರ ಬೆನ್ನಲ್ಲೇ ಫೆ.10ರಂದು ಮಮತಾ ರಾಜೀನಾಮೆ ನೀಡಿದ್ದರು.
ಜ್ಞಾನೇಶ್ ಹೊಸ ಸಿಇಸಿ?: ಮೋದಿ ನೇತೃತ್ವದ ಸಮಿತಿ ಫೆ.17ಕ್ಕೆ ಸಭೆ, ಘೋಷಣೆನವದೆಹಲಿ: ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ರಾಜೀವ್ ಕುಮಾರ್ ಅವರ ಅವಧಿ ಫೆ.18ರಂದು ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆಯುಕ್ತರ ಆಯ್ಕೆಗೆ ಫೆ.17ರಂದು ಸಭೆ ನಡೆಯಲಿದೆ. ಹಾಲಿ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಈ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ, ಕಾನೂನು ಸಚಿವ ಅರ್ಜುನ್ ಮೇಘ್ವಾಲ್ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಿಇಸಿ ಆಯ್ಕೆ ಸಮಿತಿಯ ಸಭೆಯಲ್ಲಿದ್ದಾರೆ.
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಮೈತೇಯಿ ಆಕ್ಷೇಪ, ಕುಕಿ ಸ್ವಾಗತ
ಗುವಾಹಟಿ: ರಾಜಕೀಯವಾಗಿ ಪ್ರಕ್ಷುಬ್ಧವಾಗಿರುವ ಮಣಿಪುರದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿದ್ದು, ಕುಕಿ ಮತ್ತು ಮೈತೇಯಿಗಳ ನಡುವಿನ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಬಿರೇನ್ ಸಿಂಗ್ ರಾಜೀನಾಮೆ ಬಳಿಕ ಮುಖ್ಯಮಂತ್ರಿ ಬದಲಾವಣೆಗೆ ಮೈತೇಯಿ ಸಮುದಾಯ ಒಲವು ತೋರಿದ್ದರೆ, ಸಿಎಂ ಬದಲಾವಣೆಗಿಂತ ರಾಷ್ಟ್ರಪತಿ ಆಳ್ವಿಕೆಯೇ ಉತ್ತಮ ಎಂದು ಕುಕಿ ಸಮುದಾಯ ವಾದಿಸಿತ್ತು. ಆದರೆ ಫೆ.13ರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಈ ಕ್ರಮವನ್ನು ಮೈತೇಯಿ ಸಮುದಾಯ ವಿರೋಧಿಸಿ ಪ್ರತಿಭಟನೆಗೆ ಇಳಿದಿದೆ. ಕುಕಿ ಪರವಾದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದು, ‘ಕುಕಿಗಳು ಮೈತೇಯಿಗಳನ್ನು ಎಂದಿಗೂ ನಂಬುವುದಿಲ್ಲ. ಮೈತೇಯಿ ವ್ಯಕ್ತಿ ಮುಖ್ಯಮಂತ್ರಿಯಾಗುವುದಕ್ಕಿಂತ ರಾಷ್ಟ್ರಪತಿ ಆಳ್ವಿಕೆಯೇ ಎಷ್ಟೋ ಉತ್ತಮ’ ಎಂದಿದೆ.
ಟಾಟಾ ಗ್ರೂಪ್ ಮುಖ್ಯಸ್ಥ ಚಂದ್ರಶೇಖರನ್‌ಗೆ ಬ್ರಿಟನ್ ನೈಟ್‌ಹುಡ್ ಗೌರವ ಪ್ರದಾನ
ನವದೆಹಲಿ: ಭಾರತ-ಬ್ರಿಟನ್ ನಡುವಿನ ವ್ಯಾವಹಾರಿಕ ಸಂಬಂಧ ಬಗೆಗಿನ ಸೇವೆಗಾಗಿ ಬ್ರಿಟನ್ ಸರ್ಕಾರ ಟಾಟಾ ಸನ್ಸ್‌ನ ಅಧ್ಯಕ್ಷ ಎನ್.ಚಂದ್ರಶೇಖರನ್‌ರಿಗೆ ನೈಟ್‌ಹುಡ್ ಗೌರವ ಪ್ರದಾನ ಮಾಡಿದೆ ಎಂದು ಟಾಟಾ ಗ್ರೂಪ್ ಶುಕ್ರವಾರ ಹೇಳಿದೆ. ‘ಉಭಯ ದೇಶಗಳ ಸೇವೆ ಪರಿಗಣಿಸಿ ಬ್ರಿಟಿಷ್ ಸಾಮ್ರಾಜ್ಯದ ಅತ್ಯಂತ ಶ್ರೇಷ್ಠ ಗೌರವವನ್ನು (ನೈಟ್ ಹುಡ್) ಕಿಂಗ್ ಚಾರ್ಲ್ಸ್ ಚಂದ್ರಶೇಖರನ್‌ಗೆ ಪ್ರದಾನ ಮಾಡಿದರು’ ಎಂದು ಗ್ರೂಪ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಈ ಗೌರವಕ್ಕೆ ಚಂದ್ರಶೇಖರನ್ ಅವರು ಬ್ರಿಟನ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಬ್ರಿಟಿಷ್ ಸರ್ಕಾರದ ಈ ಗೌರವಕ್ಕೆ ಅಪಾರ ಹೆಮ್ಮೆಯಿದೆ ಎಂದಿದ್ದಾರೆ.