ಸಾರಾಂಶ
ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರ ದರ ಶೇ.5.09ರಷ್ಟು ದಾಖಲಾಗಿ 4 ತಿಂಗಳಲ್ಲಿ ಅತ್ಯಂತ ಕನಿಷ್ಠವಾಗಿರುವುದಾಗಿ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ತಿಳಿಸಿದೆ.
ನವದೆಹಲಿ: ದೇಶದ ಫೆಬ್ರವರಿ ತಿಂಗಳ ಚಿಲ್ಲರೆ ಹಣದುಬ್ಬರವು ಶೇ.5.09ರಷ್ಟಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೂ ಇದು 4 ತಿಂಗಳ ಕನಿಷ್ಠ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ತಿಳಿಸಿದೆ.
ಮಂಗಳವಾರ ತನ್ನ ವರದಿ ಬಿಡುಗಡೆ ಮಾಡಿದ ಎನ್‌ಎಸ್‌ಒ,‘ಫೆಬ್ರವರಿ ತಿಂಗಳ ಹಣದುಬ್ಬರ ಬಹುತೇಕ ಜನವರಿಯ ಸಾಮ್ಯತೆ ಹೊಂದಿದೆ. ಜನವರಿಯಲ್ಲಿ ಶೇ.5.1ರ ಹಣದುಬ್ಬರ ದಾಖಲಾಗಿತ್ತು. ಆದರೆ ಆಹಾರ ಪದಾರ್ಥಗಳ ಮೇಲಿನ ಹಣದುಬ್ಬರ ಮಾತ್ರ ಶೇ.8.3ರಿಂದ ಶೇ.8.66ಕ್ಕೆ ಏರಿಕೆಯಾಗಿದೆ’ ಎಂದಿದೆ.ಗ್ರಾಹಕ ಚಿಲ್ಲರೆ ಸೂಚ್ಯಂಕ ಆಧಾರಿತ ಹಣದುಬ್ಬರ ಜನವರಿಯಲ್ಲಿ ಶೇ.5.1ರಷ್ಟು ಹಾಗೂ ಕಳೆದ ವರ್ಷ ಫೆಬ್ರವರಿಯಲ್ಲಿ ಶೇ.6.44ರಷ್ಟು ದಾಖಲಾಗಿತ್ತು. ಕೇಂದ್ರ ಸರ್ಕಾರ ಹಣದುಬ್ಬರವನ್ನು ಶೇ.4ರಿಂದ ಶೇ.6ರ ಆಸುಪಾಸಿನಲ್ಲಿ ಇರಿಸಲು ಸೂಚನೆ ನೀಡಿತ್ತು.