ಕೋಲ್ಕತಾ ವೈದ್ಯರ ಪ್ರತಿಭಟನೆ : ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಮಾತುಕತೆ ಮತ್ತೆ ಮುಂದೂಡಿಕೆ

| Published : Sep 15 2024, 01:47 AM IST / Updated: Sep 15 2024, 08:49 AM IST

ಕೋಲ್ಕತಾ ವೈದ್ಯರ ಪ್ರತಿಭಟನೆ : ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಮಾತುಕತೆ ಮತ್ತೆ ಮುಂದೂಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೋಲ್ಕತಾದ ಆರ್‌ಜಿ ಕರ್‌ ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಸಂಧಾನ ಸಭೆ ಮತ್ತೆ ರದ್ದಾಗಿದೆ. ಸಭೆಯ ನೇರಪ್ರಸಾರಕ್ಕೆ ವೈದ್ಯರು ಷರತ್ತು ವಿಧಿಸಿದ್ದರಿಂದ ಸಭೆ ರದ್ದಾಯಿತು.

ಕೋಲ್ಕತಾ: ಇಲ್ಲಿನ ಆರ್‌ಜಿ ಕರ್‌ ಆಸ್ಪತ್ರೆಯಲ್ಲಿನ ವೈದ್ಯೆಯ ಅತ್ಯಾಚಾರ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಸಂಧಾನ ಸಭೆ 3ನೇ ಸಲವೂ ರದ್ದಾಗಿದೆ. ಸಂಧಾನಕ್ಕಾಗಿ ಮಮತಾ ಮನೆ ಬಾಗಿಲವರೆಗೆ ಶನಿವಾರ ಸಂಜೆ ಬಂದಿದ್ದ 30 ವೈದ್ಯರ ನಿಯೋಗವು, ಕೊನೇ ಕ್ಷಣದಲ್ಲಿ ಮತ್ತೆ ಸಭೆಯ ನೇರಪ್ರಸಾರಕ್ಕೆ ಷರತ್ತು ಹಾಕಿತು. 

ಮಮತಾ ಇದಕ್ಕೆ ಒಪ್ಪದ ಕಾರಣ ಸಭೆ ರದ್ದುಗೊಂಡಿತು.ಬೆಳಗ್ಗೆ ಅಚ್ಚರಿ ಎಂಬಂತೆ ಪ್ರತಿಭಟನಾ ಸ್ಥಳಕ್ಕೇ ತೆರಳಿದ್ದ ಮಮತಾ, ‘ಮಳೆ ನಡುವೆಯೂ ನೀವು ರಸ್ತೆಗಳಲ್ಲಿ ಪ್ರತಿಭಟಿಸುತ್ತಿರುವುದರಿಂದ ನನಗೆ ರಾತ್ರಿ ನಿದ್ದೆ ಬರುತ್ತಿಲ್ಲ. ನಿಮ್ಮ ಇಲ್ಲಿ ಸೋದರಿಯಾಗಿ ಬಂದಿದ್ದೇನೆ. ಸಿಎಂ ಆಗಿ ಅಲ್ಲ. ದಯವಿಟ್ಟು ಮುಷ್ಕರ ನಿಲ್ಲಿಸಿ. ಈ ನಿಟ್ಟಿನಲ್ಲಿ ಇದೇ ನನ್ನ ಅಂತಿಮ ಯತ್ನ’ ಎಂದರು.

ಇದಾದ ಬಳಿಕ ಮಮತಾಗೆ ಇ-ಮೇಲ್‌ ಕಳಿಸಿದ ವೈದ್ಯರು ಸಂಧಾನಕ್ಕೆ ಸಿದ್ಧ ಎಂದರು ಹಾಗೂ ಸಿಎಂ ಮನೆಯಲ್ಲಿ ಸಂಜೆ 6ಕ್ಕೆ ಸಭೆಯೂ ಆಯೋಜನೆ ಆಯಿತು. ಆದರೆ ಕೊನೇ ಕ್ಷಣದಲ್ಲಿ ಮತ್ತೆ ವೈದ್ಯರು, ‘ಪಾರದರ್ಶಕತೆ ಉದ್ದೇಶದಿಂದ ಸಭೆಯ ನೇರಪ್ರಸಾರ ಆಗಬೇಕು’ ಎಂದು ಪಟ್ಟು ಹಿಡಿದರು ಹಾಗೂ ಮಮತಾ ಮನೆಯೊಳಗೆ ಪ್ರವೇಶಕ್ಕೆ ನಿರಾಕರಿಸಿ ಮಳೆಯಲ್ಲೇ ನಿಂತರು. 

ಬಾಗಿಲಲ್ಲೇ ಕಾಯುತ್ತಿದ್ದ ಮಮತಾ ತಾವೇ ಮನೆಯಿಂದ ಹೊರಬಂದು, ‘ನೇರಪ್ರಸಾರ ಅಸಾಧ್ಯ. ನಾನೇ ವಿಡಿಯೋಗ್ರಫಿ ಮಾಡಿಸುವೆ. ಸುಪ್ರೀಂ ಕೋರ್ಟ್‌ ಒಪ್ಪಿಗೆ ಪಡೆದು ವಿಡಿಯೋ ಬಿಡುಗಡೆ ಮಾಡಿಸುವೆ. ನನ್ನ ಮನೆತನಕ ನೀವಾಗೇ ಬಂದು ಷರತ್ತು ಹಾಕಿ ನನ್ನನ್ನು ಅವಮಾನಿಸಬೇಡಿ’ ಎಂದರು. ಆದರೆ ನೇರಪ್ರಸಾರಕ್ಕೆ ಮಮತಾ ಒಪ್ಪದ ಕಾರಣ ವೈದ್ಯರು ಮಮತಾ ಮನೆಯಿಂದ ನಿರ್ಗಮಿಸಿದರು.

ವೈದ್ಯರ ಬೇಡಿಕೆಗಳು: ವೈದ್ಯೆಯ ಮೇಲೆ ಅತ್ಯಾಚಾರ ನಡೆದ ಆರ್‌ಜಿ ಕರ್‌ ಆಸ್ಪತ್ರೆ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ವಜಾ, ಆರೋಗ್ಯ ಕಾರ್ಯದರ್ಶಿ ಹಾಗೂ ಕೋಲ್ಕತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಅಮಾನತು, ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಭದ್ರತೆ- ಇವು ವೈದ್ಯರ ಬೇಡಿಕೆಗಳು.