ಸಾರಾಂಶ
ಪ್ರಸಕ್ತ ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳ ಮೂಲಕ ಜನರು 11,333 ಕೋಟಿ ರು. ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ನವದೆಹಲಿ: ಪ್ರಸಕ್ತ ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳ ಮೂಲಕ ಜನರು 11,333 ಕೋಟಿ ರು. ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಕೇಂದ್ರ ಗೃಹ ಸಚಿವಾಲಯದ ಭಾಗವಾದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ(ಐ4ಸಿ) ನೀಡಿರುವ ಮಾಹಿತಿಯ ಪ್ರಕಾರ ಷೇರು ವ್ಯವಹಾರಗಳಲ್ಲಿನ ವಂಚನೆಗೆ ಸಂಬಂಧಿಸಿದಂತೆ 2,28,094 ದೂರುಗಳು ದಾಖಲಾಗಿದ್ದು, ಅತಿ ಹೆಚ್ಚು, 4,636 ಕೋಟಿ ರು. ನಷ್ಟವಾಗಿದೆ. ಹೂಡಿಕೆ ಸಂಬಂಧಿತ ವಂಚನೆಗಳ 1,00,360 ದೂರುಗಳು ದಾಖಲಾಗಿದ್ದು, 3,216 ಕೋಟಿ ರು. ನಷ್ಟವಾಗಿದೆ. ಡಿಜಿಟಲ್ ಅರೆಸ್ಟ್ ವಂಚನೆಗಳ 63,481 ದೂರುಗಳು ದಾಖಲಾಗಿದ್ದು, 1,616 ಕೋಟಿ ರು. ಕಳೆದುಕೊಳ್ಳಲಾಗಿದೆ.ಇತ್ತೀಚೆಗೆ ನಡೆದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್ ಅರೆಸ್ಟ್ ಹಾಗೂ ವಿಚಾರಣೆಯ ಬಗ್ಗೆ ಎಚ್ಚರಿಸಿದ್ದು, ಕಾನೂನಿನಡಿ ಇಂತಹ ಯಾವುದೇ ವ್ಯವಸ್ಥೆ ಇಲ್ಲ ಎಂದಿದ್ದರು.