ಆಪರೇಷನ್‌ ಸಿಂದೂರ ಬೆನ್ನಲ್ಲೇ ರಕ್ಷಣಾ ಇಲಾಖೆಗೆ ಹೆಚ್ಚುವರಿ ₹50,000 ಕೋಟಿ

| N/A | Published : May 17 2025, 02:21 AM IST / Updated: May 17 2025, 06:28 AM IST

ಸಾರಾಂಶ

ಪಾಕ್‌ ಜತೆಗಿನ ಸಂಘರ್ಷದ ಬೆನ್ನಲ್ಲೇ ಕೇಂದ್ರ ಸರ್ಕಾರವು ಇದೀಗ ರಕ್ಷಣಾ ಇಲಾಖೆಗೆ ಹೆಚ್ಚುವರಿಯಾಗಿ 50 ಸಾವಿರ ಕೋಟಿ ವಿನಿಯೋಗಿಸಲು ನಿರ್ಧರಿಸಿದೆ. ಈ ಮೂಲಕ ದೇಶದ ಸೈನ್ಯವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಪಾಕ್‌ ಜತೆಗಿನ ಸಂಘರ್ಷದ ಬೆನ್ನಲ್ಲೇ ಕೇಂದ್ರ ಸರ್ಕಾರವು ಇದೀಗ ರಕ್ಷಣಾ ಇಲಾಖೆಗೆ ಹೆಚ್ಚುವರಿಯಾಗಿ 50 ಸಾವಿರ ಕೋಟಿ ವಿನಿಯೋಗಿಸಲು ನಿರ್ಧರಿಸಿದೆ. ಈ ಮೂಲಕ ದೇಶದ ಸೈನ್ಯವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಪೂರಕ ಬಜೆಟ್‌ ಅಂದಾಜು ಮೂಲಕ ರಕ್ಷಣಾ ಇಲಾಖೆಗೆ ಹೆಚ್ಚುವರಿ ಅನುದಾನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಲಾಗಿದೆ ಎನ್ನಲಾಗಿದ. ಈ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ ರಕ್ಷಣಾ ಇಲಾಖೆಯ ಬಜೆಟ್‌ 7 ಲಕ್ಷ ಕೋಟಿ ರು. ದಾಟಿದಂತಾಗಲಿದೆ.

ಫೆ.1ರಂದು ಕೇಂದ್ರ ವಿತ್ತ ಸಚಿವೆ ಮಂಡಿಸಿದ್ದ 2025-26ನೇ ಸಾಲಿನ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ 6.81 ಲಕ್ಷ ಕೋಟಿ ತೆಗೆದಿರಿಸಿದ್ದರು. ಕಳೆದ ಬಜೆಟ್‌ಗೆ ಹೋಲಿಸಿದರೆ ಈ ಬಾರಿ ಶೇ.9.2ರಷ್ಟು ಹೆಚ್ಚುವರಿ ಹಣವನ್ನು ರಕ್ಷಣಾ ಇಲಾಖೆಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ.

ಇದೀಗ ರಕ್ಷಣಾ ಇಲಾಖೆಗೆ ಹೆಚ್ಚುವರಿಯಾಗಿ 50 ಸಾವಿರ ಕೋಟಿ ರು. ತೆಗೆದಿರಿಸುವ ನಿರ್ಧಾರಕ್ಕೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಅನುಮೋದನೆ ಪಡೆಯುವ ಸಾಧ್ಯತೆ ಇದೆ. ಸಂಶೋಧನೆ ಮತ್ತು ಅಭಿವೃದ್ಧಿ, ಶಸ್ತ್ರಾಸ್ತ್ರಗಳ ಖರೀದಿ, ಮದ್ದುಗುಂಡುಗಳು ಮತ್ತು ಅಗತ್ಯ ಸಲಕರಣೆಗಳಿಗಾಗಿ ಈ ಹಣ ವಿನಿಯೋಗಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. 2014-15ರಲ್ಲಿ ರಕ್ಷಣಾ ಇಲಾಖೆಗೆ 2.29 ಲಕ್ಷ ಕೋಟಿ ರು. ವಿನಿಯೋಗ ಮಾಡಲಾಗಿತ್ತು. ಆದರೆ ಇದೀಗ ಅದು 7 ಲಕ್ಷ ಕೋಟಿ ರು. ದಾಟಿದೆ. ಸದ್ಯ ಒಟ್ಟಾರೆ ಬಜೆಟ್‌ನ ಶೇ.13ರಷ್ಟು ಹಣ ಸದ್ಯ ರಕ್ಷಣಾ ಇಲಾಖೆಗೆ ವಿನಿಯೋಗ ಮಾಡಲಾಗುತ್ತಿದೆ. ಇತರೆ ಸಚಿವಾಲಯಗಳಿಗೆ ಹೋಲಿಸಿದರೆ ರಕ್ಷಣಾ ಬಜೆಟ್‌ಗೆ ಸಿಂಹಪಾಲು ಸಿಗುತ್ತಿದೆ.

ಪಹಲ್ಗಾಂ ದಾಳಿ ಬಳಿಕ ಪಾಕ್‌ ಜತೆಗೆ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ಭಾರತಕ್ಕೆ ಯುದ್ಧಸನ್ನದ್ಧವಾಗಿರುವುದು ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ರಕ್ಷಣಾ ಬಜೆಟ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

Read more Articles on