ಸಾರಾಂಶ
ಗಾಂಧಿನಗರ: ಗುಜರಾತಿನ ನಕಲಿ ನೋಟು ಜಾಲ ಪತ್ತೆಯಾಗಿದ್ದು, 500 ರು. ಮುಖಬೆಲೆಯ ನೋಟಿನಲ್ಲಿ ಮಹಾತ್ಮ ಗಾಂಧಿ ಭಾವಚಿತ್ರದ ಬದಲು , ನಟ ಅನುಪಮ್ ಖೇರ್ ಭಾವಚಿತ್ರವಿರುವ ನೋಟುಗಳು ಪತ್ತೆಯಾಗಿದೆ. ಗುಜರಾತ್ ಪೊಲೀಸರು ಕಾರ್ಯಾಚರಣೆ ವೇಳೆ 1.60 ಕೋಟಿ ರು. ಮುಖಬೆಲೆಯ ನಕಲಿ ನೋಟು ಜಪ್ತಿ ಮಾಡಲಾಗಿದೆ.
ಪ್ರಾಥಮಿಕ ತನಿಖೆ ಅನ್ವಯ ನೋಟಿನಲ್ಲಿ ಗಾಂಧೀಜಿ ಬದಲು ಅನುಪಮ್ ಖೇರ್ ಭಾವಚಿತ್ರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬದಲು ರಿಸೋಲ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿಸಲಾಗಿತ್ತು. ಆರೋಪಿಗಳು ಬಟ್ಟೆ ಮಾರಾಟಕ್ಕೆಂದು ಜಾಗ ಬಾಡಿಗೆ ಪಡೆದುಕೊಂಡು ನಕಲು ನೋಟುಗಳನ್ನು ಮುದ್ರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ.
==
4 ರಾಜ್ಯಗಳಲ್ಲಿ ಸಿಬಿಐ ದಾಳಿ: 26 ಸೈಬರ್ ವಂಚಕರ ಬಂಧನ
ನವದೆಹಲಿ: ಸೈಬರ್ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವವರನ್ನು ಗುರಿಯಾಗಿಸಿಕೊಂಡು 4 ರಾಜ್ಯಗಳಲ್ಲಿ ಸಿಬಿಐ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ವೇಳೆ ವಂಚನೆ ಚಟುವಟಿಕೆಯಲ್ಲಿ ಭಾಗವಹಿಸಿದ್ದ 26 ಸೈಬರ್ ವಂಚಕರನ್ನು ಬಂಧಿಸಲಾಗಿದೆ.
ಪುಣೆ, ಹೈದರಾಬಾದ್. ಅಹಮದಾಬಾದ್, ವಿಶಾಖಪಟ್ಟಣಂನ 32 ಕಡೆಗಳಲ್ಲಿ ಸಿಬಿಐ, ಕಾರ್ಯಾಚರಣೆ ಚಕ್ರ-3 ಅಡಿಯಲ್ಲಿ ಕಳೆದ ಗುರುವಾರ ದಾಳಿ ನಡೆಸಿತ್ತು. ಬಂಧಿತರು ಆನ್‌ಲೈನ್ ಮೂಲಕ ವಿಶ್ವದ ವಿವಿಧ ದೇಶಗಳ ಜನರನ್ನು ವಂಚಿಸುತ್ತಿದ್ದರು. ಈ ಸಂಬಂಧ 4 ಕಾಲ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿ 26 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 58.45 ಲಕ್ಷ ರು. ನಗದು. ಲಾಕರ್ ಕೀ ಹಾಗೂ ಐಷಾರಾಮಿ ವಾಹನ ವಶಪಡಿಸಿಕೊಳ್ಳಲಾಗಿದೆ.
==
ಯಾ, ಯಾ ಅನ್ಬೇಡಿ, ಇದು ಕಾಫಿ ಶಾಪ್ ಅಲ್ಲ: ವಕೀಲರಿಗೆ ಗದರಿದ ಸಿಜೆಐ
ನವದೆಹಲಿ: ಕಲಾಪದ ವೇಳೆ ವಕೀಲರೊಬ್ಬರು ಬಳಸಿದ ಅನೌಪಚಾರಿಕ ಭಾಷೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ್, ‘ಇದು ಕಾಫಿ ಅಂಗಡಿಯಲ್ಲ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಘಟನೆ ಸೋಮವಾರ ನಡೆದಿದೆ. ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಾಧೀಶರ ಮಾತಿಗೆ ವಕೀಲರೊಬ್ಬರು ‘ಯಾ ಯಾ’ ಎನ್ನುತ್ತಿದ್ದರು. ಈ ವೇಳೆ ಅವರನ್ನು ತಡೆದ ಸಿಜೆಐ, ‘ಇಂತಹ ಅನೌಪಚಾರಿಕ ಭಾಷೆ ಬಳಸಲು ಇದು ಕಾಫಿ ಅಂಗಡಿ ಅಲ್ಲ. ನ್ಯಾಯಾಲಯದಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕ’ ಎಂದರು.
==
ಯುಪಿ ಮುಸ್ಲಿಮರ ಸಂಖ್ಯೆ ಏರುತ್ತಿದೆ, ಬಿಜೆಪಿ ಆಡಳಿತ ಅಂತ್ಯದತ್ತ: ಎಸ್‌ಪಿ ಶಾಸಕ
ಬಿಜ್ನೋರ್: ‘ಉತ್ತರಪ್ರದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಏರಿಕೆಯಾಗುತ್ತಿದ್ದು, ಇದರಿಂದಾಗಿ 2027ರ ವೇಳೆಗೆ ಬಿಜೆಪಿ ರಾಜ್ಯ ತೊರೆಯುವಂತಾಗಬಹುದು’ ಎಂದು ಮಾಜಿ ಸಚಿವ, ಹಾಲಿ ಸಮಾಜವಾದಿ ಪಕ್ಷದ ಶಾಸಕ ಮೆಹಬೂಬ್ ಅಲಿ ಹೇಳಿದ್ದಾರೆ. ಭಾನುವಾರ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅಲಿ, ಜನಸಂಖ್ಯಾ ಬದಲಾವಣೆಯಿಂದ ಎಸ್‌ಪಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.
ಜೊತೆಗೆ, ಬಿಜೆಪಿಯನ್ನು ಮುಘಲ್ ಸಾಮ್ರಾಜ್ಯದೊಂದಿಗೆ ಹೋಲಿಸುತ್ತಾ, ‘800 ವರ್ಷಗಳಿಗೂ ಅಧಿಕ ಆಳ್ವಿಕೆ ನಡೆಸಿದ ಮುಘಲರು ಈಗ ಅಸ್ತಿತ್ವದಲ್ಲಿಲ್ಲ. ಹೀಗಿರುವಾಗ ಬಿಜೆಪಿ ಶಾಶ್ವತವಾಗಿ ಉಳಿಯುವುದೆಂದು ಹೇಗೆ ಹೇಳುವಿರಿ’ ಎಂದು ಪ್ರಶ್ನಿಸಿದ್ದಾರೆ. ಈ ವಿವಾದಿತ ಹೇಳಿಕೆ ಸಂಬಂಧ ಮೆಹಬೂಬ್ ಅಲಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
==
ಝಾಕಿರ್ ನಾಯ್ಕ್ ಪಾಕ್‌ಗೆ: ಇಡೀ ತಿಂಗಳು ಭಾಷಣ
ಇಸ್ಲಾಮಾಬಾದ್: ವಿವಾದಿತ ಇಸ್ಲಾಮಿಕ್ ಧರ್ಮಬೋಧಕ ಡಾ. ಝಾಕಿರ್ ನಾಯ್ಕ್ ಪಾಕಿಸ್ತಾನಕ್ಕೆ ಆಗಮಿಸಿದ್ದು, ಅ. 28 ರವರೆಗೆ ಅಲ್ಲಿಯೇ ಇರಲಿದ್ದಾನೆ. ಆತ ಇಸ್ಲಾಮಾಬಾದ್, ಕರಾಚಿ ಮತ್ತು ಲಾಹೋರ್‌ನಲ್ಲಿ ಸಾರ್ವಜನಿಕ ಭಾಷಣಗಳನ್ನು ಮಾಡಲಿದ್ದಾನೆ ಮತ್ತು ಶುಕ್ರವಾರದ ಪ್ರಾರ್ಥನಾ ಸಭೆಗಳನ್ನು ಮುನ್ನಡೆಸಲಿದ್ದಾನೆ ಎಂದು ಧಾರ್ಮಿಕ ಸಚಿವಾಲಯ ಹೇಳಿದೆ. ಭಾರತದಲ್ಲಿ ಸಾಕಷ್ಟು ಕೇಸುಗಳಲ್ಲಿ ನಾಯ್ಕ್ ಬೇಕಾಗಿದ್ದು, ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.