ಸಾರಾಂಶ
ನವದೆಹಲಿ : ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಪದಚ್ಯುತಗೊಳಿಸುವಂತೆ ಪ್ರತಿಪಕ್ಷಗಳು ನೀಡಿದ ವಾಗ್ದಂಡನೆ ನೋಟಿಸ್ (ಅವಿಶ್ವಾಸ ನಿರ್ಣಯ) ಅನ್ನು ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಅವರು ಗುರುವಾರ ವಜಾಗೊಳಿಸಿದ್ದಾರೆ.
‘ಪ್ರತಿಪಕ್ಷಗಳು ನೀಡಿದ್ದ ನೋಟಿಸ್ ದೋಷಪೂರಿತವಾಗಿದೆ. ಧನಕರ್ ಹೆಸರಿನ ಸ್ಪೆಲ್ಲಿಂಗ್ ಅನ್ನೂ ಇದರಲ್ಲಿ ಸರಿಯಾಗಿ ಬರೆದಿಲ್ಲ. ಅಲ್ಲದೆ ಹಕ್ಕುಚ್ಯುತಿ ಮಂಡಿಸುವ ಮುನ್ನ 14 ದಿನಗಳ ನೋಟಿಸ್ ನೀಡಬೇಕು. ಅದನ್ನೂ ಪಾಲಿಸಿಲ್ಲ. ಉಪರಾಷ್ಟ್ರಪತಿಗಳ ಪ್ರತಿಷ್ಠೆಯನ್ನು ಹಾಳುಮಾಡಲು ತರಾತುರಿಯಲ್ಲಿ ವಾಗ್ದಂಡನೆ ನಿಲುವಳಿ ಮಂಡನೆಗೆ ಯತ್ನ ಮಾಡಲಾಗಿದೆ’ ಎಂದು ರೂಲಿಂಗ್‌ನಲ್ಲಿ ಹರಿವಂಶ್ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
‘ವಾಗ್ದಂಡನೆ ನೋಟೀಸ್ ರಾಷ್ಟ್ರದ ಸಾಂವಿಧಾನಿಕ ಸಂಸ್ಥೆಗಳನ್ನು ಅವಹೇಳನ ಮಾಡುವ ಮತ್ತು ಪ್ರಸ್ತುತ ಉಪರಾಷ್ಟ್ರಪತಿಯನ್ನು ನಿಂದಿಸುವ ವಿನ್ಯಾಸದ ಭಾಗವಾಗಿದೆ’ ಎಂದೂ ಅವರು ಕಿಡಿಕಾರಿದ್ದಾರೆ. 60 ವಿರೋಧ ಪಕ್ಷದ ಸದಸ್ಯರು ಡಿಸೆಂಬರ್ 10 ರಂದು ಶ್ರೀ ಧನಕರ್ ಅವರನ್ನು ಪದಚ್ಯುತಗೊಳಿಸಬೇಕು ಎಂದು ಕೋರಿದ್ದರು. ವಿಪಕ್ಷಗಳನ್ನು ಅವರು ಕೀಳಾಗಿ ಕಾಣುತ್ತ ಪಕ್ಷಪಾತಿಯಾಗಿ ಹಾಗೂ ಬಿಜೆಪಿ ವಕ್ತಾರನಂತೆ ವರ್ತಿಸುತ್ತಾರೆ, ಅವರಿಗೆ ಅವರ ಮೇಲೆ ವಿಶ್ವಾಸವಿಲ್ಲ ಎಂದು ನೋಟಿಸ್‌ನಲ್ಲಿ ವಿಪಕ್ಷ ಸದಸ್ಯರು ಹೇಳಿದ್ದರು. ಉಪರಾಷ್ಟ್ರಪತಿ ವಿರುದ್ಧ ಅವಿಶ್ವಾಸ ನಿರ್ಣಯ ಬಾರತದ ಇತಿಹಾಸದಲ್ಲೇ ಮೊದಲಾಗಿತ್ತು.