ರಾಜ್ಯಸಭೆ ಅಖಾಡಕ್ಕೆ ಸೋನಿಯಾ ಗಾಂಧಿ

| Published : Feb 15 2024, 01:38 AM IST / Updated: Feb 15 2024, 07:55 AM IST

Sonia Gandhi

ಸಾರಾಂಶ

ಸತತ 5 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಬಾರಿ ರಾಜ್ಯಸಭೆ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಜೈಪುರ: ಸತತ 5 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಬಾರಿ ರಾಜ್ಯಸಭೆ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿವೃತ್ತಿಯಿಂದ ತೆರವಾಗಲಿರುವ ರಾಜಸ್ಥಾನ ಒಂದು ಸ್ಥಾನಕ್ಕೆ ಸೋನಿಯಾಗೆ ರಾಜ್ಯಸಭೆ ಟಿಕೆಟ್‌ ನೀಡಲಾಗಿದ್ದು, ಅವರು ಬುಧವಾರ ನಾಮಪತ್ರ ಕೂಡಾ ಸಲ್ಲಿಸಿದ್ದಾರೆ.

ಸೋನಿಯಾ ಈ ಬಾರಿ ದಕ್ಷಿಣದ ಕರ್ನಾಟಕ ಅಥವಾ ತೆಲಂಗಾಣದ ಪೈಕಿ ಒಂದು ರಾಜ್ಯದಿಂದ ಸ್ಪರ್ಧಿಸಬಹುದೆಂಬ ವರದಿಗಳಿದ್ದವಾದರೂ ಅಂತಿಮವಾಗಿ ದೆಹಲಿಗೆ ಸಮೀಪಿರುವ ರಾಜಸ್ಥಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಉಳಿದಂತೆ ಪಕ್ಷದ ಹಿರಿಯ ನಾಯಕರಾದ ಅಜಯ್ ಮಾಕನ್‌ಗೆ ಕರ್ನಾಟಕದಿಂದ ರಾಜ್ಯಸಭೆ ಟಿಕೆಟ್‌ ನೀಡಲಾಗಿದ್ದರೆ, ಕರ್ನಾಟಕದಿಂದ ಸ್ಪರ್ಧಿಸಬಹುದು ಎಂದು ಹೇಳಲಾಗಿದ್ದ ಹಿರಿಯ ವಕೀಲ, ಕಾಂಗ್ರೆಸ್‌ನ ಮಾಜಿ ವಕ್ತಾರ ಅಭಿಷೇಕ್‌ ಮನು ಸಿಂಘ್ವಿಗೆ ಹಿಮಾಚಲಪ್ರದೇಶದಿಂದ, ರೇಣುಕಾ ಚೌಧರಿ ಅವರಿಗೆ ಮಧ್ಯಪ್ರದೇಶದಿಂದ ಟಿಕೆಟ್‌ ನೀಡಲಾಗಿದೆ.

ಹೊಸ ರಾಜಕೀಯ: 1999ರಲ್ಲಿ ಮೊದಲ ಬಾರಿ ಚುನಾವಣಾ ರಾಜಕೀಯ ಕಾಲಿಟ್ಟಿದ್ದ ಸೋನಿಯಾ ಗಾಂಧಿ ಆಗ ಕರ್ನಾಟಕದ ಬಳ್ಳಾರಿ ಮತ್ತು ಉತ್ತರಪ್ರದೇಶದ ಅಮೇಠಿ ಎರಡೂ ಕಡೆ ಸ್ಪರ್ಧಿಸಿ ಜಯ ಸಾಧಿಸಿದ್ದರು. 

ಅಮೇಠಿಯಲ್ಲಿ ಸೋನಿಯಾ ವಿರುದ್ಧ ಬಿಜೆಪಿಯ ಸಂಜಯ್‌ ಸಿಂಗ್‌ ಮತ್ತು ಬಳ್ಳಾರಿಯಲ್ಲಿ ಬಿಜೆಪಿಯ ಸುಷ್ಮಾ ಸ್ವರಾಜ್‌ ತೀವ್ರ ಸ್ಪರ್ಧೆ ನೀಡಿ ಸೋತಿದ್ದರು. ಈ ಪೈಕಿ ಸೋನಿಯಾ ಅಮೇಠಿ ಕ್ಷೇತ್ರ ಉಳಿಸಿಕೊಂಡಿದ್ದರು. 

ಆದರೆ 2004ರಲ್ಲಿ ಅಮೇಠಿ ಕ್ಷೇತ್ರವನ್ನು ತಮ್ಮ ಪುತ್ರ ರಾಹುಲ್‌ಗೆ ಬಿಟ್ಟುಕೊಟ್ಟ ಸೋನಿಯಾ ತಾವು ನಂತರ 4 ಬಾರಿ ರಾಯ್‌ಬರೇಲಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು.

ಈ ನಡುವೆ ಇತ್ತೀಚಿನ ದಿನಗಳಲ್ಲಿ ವಯೋಸಹಜ ಸಮಸ್ಯೆಗಳನ್ನು ಎದುರಿಸುತ್ತಿರುವ ಸೋನಿಯಾ (77), ಲೋಕಸಭೆ ಬಿಟ್ಟು ರಾಜ್ಯಸಭೆ ಪ್ರವೇಶಕ್ಕೆ ಮುಂದಾಗಿದ್ದಾರೆ. 

ಬುಧವಾರ ಪುತ್ರ ರಾಹುಲ್‌, ಪುತ್ರಿ ಪ್ರಿಯಾಂಕಾ ವಾದ್ರಾ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮೊದಲಾದ ನಾಯಕರ ಜೊತೆಗೂಡಿ ಆಗಮಿಸಿದ ಸೋನಿಯಾ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. 

ಹಾಲಿ ಕಾಂಗ್ರೆಸ್‌ ಹೊಂದಿರುವ ಮತಗಳ ಆಧಾರದಲ್ಲಿ ಅದು ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು. ಹೀಗಾಗಿ ಸೋನಿಯಾ ರಾಜ್ಯಸಭೆ ಪ್ರವೇಶ ಖಚಿತವಾಗಿದೆ.

ಗಾಂಧೀ ಕುಟುಂಬದ ಸದಸ್ಯರೊಬ್ಬರು ರಾಜ್ಯಸಭೆ ಪ್ರವೇಶ ಮಾಡುತ್ತಿರುವ ಎರಡನೇ ಉದಾಹರಣೆ ಇದಾಗಿದೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ 1964-67ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದರು.

ಇದೇ ವೇಳೆ ಕೇಂದ್ರದ ಮಾಜಿ ಸಚಿವ ಅಜಯ್‌ ಮಾಕನ್‌ ಅವರಿಗೆ ಕರ್ನಾಟಕದ ರಾಜ್ಯಸಭೆ ಟಿಕೆಟ್‌ ನೀಡಲಾಗಿದೆ. ಮಾಕನ್‌ 2004, 2009ರಲ್ಲಿ ದೆಹಲಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 

ಆದರೆ 2014ರಲ್ಲಿ ಬಿಜೆಪಿಯ ಮೀನಾಕ್ಷಿ ಲೇಖಿ ವಿರುದ್ಧ ಸೋಲು ಕಂಡಿದ್ದರು.ಮುಂದಿನ ತಿಂಗಳು ರಾಜ್ಯಸಭೆಯ 15 ರಾಜ್ಯಗಳಿಗೆ ಸೇರಿ 56 ಸ್ಥಾನಗಳು ತೆರವಾಗಲಿದ್ದು ಅವುಗಳಿಗೆ ಫೆ.27ರಂದು ಚುನಾವಣೆ ನಿಗದಿಯಾಗಿದೆ. ನಾಮಪತ್ರ ಸಲ್ಲಿಸಲು ಫೆ.15 ಕಡೆಯ ದಿನ.

ಪ್ರಿಯಾಂಕಾ ರಾಯ್‌ಬರೇಲಿಗೆ?
ಸೋನಿಯಾ ಲೋಕಸಭೆ ಸ್ಪರ್ಧೆಯಿಂದ ಹಿಂದೆ ಸರಿದಿರುವ ಕಾರಣ ಉತ್ತರಪ್ರದೇಶ ರಾಯ್‌ಬರೇಲಿ ಕ್ಷೇತ್ರದಿಂದ ಅವರ ಪುತ್ರಿ ಪ್ರಿಯಾಂಕಾ ವಾದ್ರಾ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯಸಭೆ: ನಡ್ಡಾ ಗುಜರಾತ್‌ನಿಂದ ಕಣಕ್ಕೆ, ಪಕ್ಷಾಂತರಿ ಚವಾಣ್‌ಗೆ ಬಿಜೆಪಿ ಟಿಕೆಟ್‌

ನವದೆಹಲಿ: ರಾಜ್ಯಸಭಾ ಚುನಾವಣೆ ಸಂಬಂಧ ಬಿಜೆಪಿ ತನ್ನ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಗುಜರಾತ್‌ನಿಂದ ಟಿಕೆಟ್‌ ನೀಡಲಾಗಿದೆ.

ಇನ್ನು, ಮಂಗಳವಾರವಷ್ಟೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ಅವರಿಗೆ ಮಹಾರಾಷ್ಟ್ರದಿಂದ ಟಿಕೆಟ್‌ ನೀಡಲಾಗಿದೆ. 

ಕೇಂದ್ರ ಸಚಿವರಾದ ಅಶ್ವಿನ್‌ ವೈಷ್ಣವ್‌ ಅವರಿಗೆ ಒಡಿಶಾ ಮತ್ತು ಎಲ್‌.ಮುರುಗನ್‌ ಅವರಿಗೆ ಮಧ್ಯಪ್ರದೇಶದ ಟಿಕೆಟ್‌ ನೀಡಲಾಗಿದೆ.

ದೇವ್ರಾಗೆ ಶಿವಸೇನೆ ಟಿಕೆಟ್‌: ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಶಿಂಧೆ ಬಣದ ಶಿವಸೇನೆ ಸೇರಿದ ಮಿಲಿಂದ್‌ ದೇವ್ರಾಗೆ ಶಿವಸೇನೆಯು ರಾಜ್ಯಸಭೆ ಟಿಕೆಟ್ ನೀಡಿದೆ. ಗುರುವಾರ ಅವರು ನಾಮಪತ್ರ ಸಲ್ಲಿಸಲಿದ್ದಾರೆ.

ನಡ್ಡಾ ಹಾಲಿ ತಮ್ಮದೇ ತವರು ರಾಜ್ಯವಾದ ಹಿಮಾಚಲಪ್ರದೇಶದ ರಾಜ್ಯಸಭೆ ಸದಸ್ಯರಾಗಿದ್ದಾರೆ. ಆದರೆ ಈ ಬಾರಿ ಅವರ ಮರು ಆಯ್ಕೆಗೆ ಅಗತ್ಯವಾದ ಪ್ರಮಾಣದ ಮತಗಳು ರಾಜ್ಯದಲ್ಲಿ ಇಲ್ಲದ ಕಾರಣ ಅವರಿಗೆ ಗುಜರಾತ್‌ನ ಟಿಕೆಟ್‌ ನೀಡಲಾಗಿದೆ.

28 ಬಿಜೆಪಿ ರಾಜ್ಯಸಭೆ ಸಂಸದರ ಪೈಕಿ 4 ಮಂದಿಗೆ ಮಾತ್ರ ಮತ್ತೆ ಟಿಕೆಟ್‌
ನವದೆಹಲಿ: ರಾಜ್ಯಸಭೆಯಿಂದ ಹೊರಹೋಗುತ್ತಿರುವ 28 ಬಿಜೆಪಿ ಸಂಸದರ ಪೈಕಿ ಬಿಜೆಪಿ ಕೇವಲ 4 ಮಂದಿಗೆ ಮರಳಿ ನೀಡಿದ್ದು, ಮಿಕ್ಕ 24 ಸಂಸದರಿಗೆ ಟಿಕೆಟ್‌ ನಿರಾಕರಿಸಿದೆ. 

ಈ ಮೂಲಕ ಅವರನ್ನು ಮುಂಬರುವ ಲೋಕಸಭೆ ಚುನಾವಣೆ ಹಾಗೂ ಇತರೆ ಹುದ್ದೆಗಳ ಕರ್ತವ್ಯಕ್ಕೆ ನೀಡಲು ಬಿಜೆಪಿ ತಯಾರಿ ನಡೆಸಿದೆ ಎಂದು ಹೇಳಲಾಗಿದೆ.

ಮರಳಿ ಟಿಕೆಟ್ ಪಡೆದ ನಾಲ್ವರೆಂದರೆ ಬಿಜೆಪಿಯ ಅಧ್ಯಕ್ಷ ಜೆ.ಪಿ.ನಡ್ಡಾ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಸಚಿವ ಎಲ್‌. ಮುರುಗನ್‌ ಹಾಗೂ ಪಕ್ಷದ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ. ಮಿಕ್ಕಂತೆ 24 ಹಾಲಿ ಸಂಸದರಿಗೆ ಟಿಕೆಟ್‌ ನಿರಾಕರಿಸಿದೆ.