ಸಾರಾಂಶ
ಜೈಪುರ: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ವಿರುದ್ಧ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ಇನ್ನೊಬ್ಬ ಹಿರಿಯ ಆರ್‌ಎಸ್‌ಎಸ್ ನಾಯಕ ಇಂದ್ರೇಶ್ ಕುಮಾರ್ ಕೂಡ ಚಾಟಿ ಬೀಸಿದ್ದು, ‘ಅಹಂಕಾರಿಗಳು 241ಕ್ಕೇ ಸ್ತಬ್ಧರಾಗಿದ್ದಾರೆ’ ಎಂದು ಹೇಳಿದ್ದಾರೆ.
ಸೇವಕರಾದವರು ದುರಹಂಕಾರ ಬಿಟ್ಟು, ಗೌರವದೊಂದಿಗೆ ಜನರ ಸೇವೆ ಮಾಡಬೇಕು ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರು ಕೆಲ ದಿನಗಳ ಹಿಂದಷ್ಟೇ ಕಿಡಿಕಾರಿದ್ದರು. ಇದರ ಬೆನ್ನಲ್ಲೇ ಜೈಪುರ ಬಳಿ ನಡೆದ ರಾಮರಥ ಅಯೋಧ್ಯೆ ಯಾತ್ರೆ ದರ್ಶನ ಪೂಜೆ ಸಮಾರೋಪದಲ್ಲಿ ಮಾತನಾಡಿದ ಇಂದ್ರೇಶ್ ಕುಮಾರ್, ‘ರಾಮನಿಗೆ ಭಕ್ತಿ ತೋರಿದರೂ ಬಳಿಕ ಅಹಂಕಾರ ಪ್ರದರ್ಶಿಸಿದ ಪಕ್ಷ 241 ಸ್ಥಾನಗಳಿಗೇ ನಿಂತು ಹೋಯಿತು. ಆದಾಗ್ಯೂ ಅತಿ ದೊಡ್ಡ ಪಕ್ಷವಾಯಿತು. ರಾಮನಲ್ಲಿ ನಂಬಿಕೆ ಇಲ್ಲದವರು 234ಕ್ಕೇ ಸ್ತಬ್ಧಗೊಂಡರು’ ಎಂದು ಇಂಡಿಯಾ ಕೂಟದ ಹೆಸರೆತ್ತದೆ ಪ್ರಸ್ತಾಪಿಸಿದ್ದಾರೆ.
‘ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯದ ವಿಧಾನವನ್ನು ನೋಡಿ. ಭಕ್ತಿ ತೋರಿದವರು ಬಳಿಕ ಅಹಂಕಾರಿಗಳಾದರು. ಆದಾಗ್ಯೂ ಅವರು ಅತಿದೊಡ್ಡ ಪಕ್ಷವಾದರು. ಅವರು ಪಡೆಯಬೇಕಿದ್ದ ಮತ ಹಾಗೂ ಅಧಿಕಾರವನ್ನು ಅಹಂಕಾರದ ಕಾರಣಕ್ಕೆ ದೇವರೇ ನಿಲ್ಲಿಸಿದ. ರಾಮನ ಬಗ್ಗೆ ವಿರೋಧ ಮಾಡುವವರಿಗೆ ಅಧಿಕಾರ ಸಿಗಲಿಲ್ಲ. ಅವರೆಲ್ಲರಿಗೂ 2ನೇ ಸ್ಥಾನ ಸಿಕ್ಕಿತು’ ಎಂದು ವಿಶ್ಲೇಷಿಸಿದ್ದಾರೆ.
;Resize=(128,128))
;Resize=(128,128))