ಕೌಟುಂಬಿಕ ಮಾಸಿಕ ತಲಾ ವೆಚ್ಚ ಕುರಿತ ವರದಿ : ಕನಿಷ್ಠ ಏರಿಕೇಲಿ ಕರ್ನಾಟಕಕ್ಕೆ 2ನೇ ಸ್ಥಾನ

| N/A | Published : Jan 31 2025, 12:46 AM IST / Updated: Jan 31 2025, 05:12 AM IST

ಸಾರಾಂಶ

ಜನರ ಜೀವನ ಗುಣಮಟ್ಟ ಮತ್ತು ಬಡತನದ ಪ್ರಮಾಣ ಅಳೆಯಲು ನಡೆಸುವ ಕೌಟುಂಬಿಕ ಮಾಸಿಕ ತಲಾ ವೆಚ್ಚ ಕುರಿತ ವರದಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ನವದೆಹಲಿ: ಜನರ ಜೀವನ ಗುಣಮಟ್ಟ ಮತ್ತು ಬಡತನದ ಪ್ರಮಾಣ ಅಳೆಯಲು ನಡೆಸುವ ಕೌಟುಂಬಿಕ ಮಾಸಿಕ ತಲಾ ವೆಚ್ಚ ಕುರಿತ ವರದಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. 2023-24ನೇ ಸಾಲಿನ ಈ ವರದಿ ಅನ್ವಯ ಗ್ರಾಮೀಣ ಪ್ರದೇಶಗಳ ಪೈಕಿ ಒಡಿಶಾದಲ್ಲಿ ವೆಚ್ಚದಲ್ಲಿ ಅತಿ ಹೆಚ್ಚಿನ ಏರಿಕೆ ಕಂಡುಬಂದಿದ್ದರೆ, ನಗರ ಪ್ರದೇಶಗಳ ಪೈಕಿ ಪಂಜಾಬ್‌ ಮೊದಲ ಸ್ಥಾನದಲ್ಲಿದೆ. 

ಆದರೆ ದೇಶದ ಮುಂಚೂಣಿ ರಾಜ್ಯಗಳ ಪೈಕಿ ಒಂದಾದ ಕರ್ನಾಟಕ ಅತಿ ಕನಿಷ್ಠ ಏರಿಕೆ ಕಂಡ ರಾಜ್ಯಗಳ ಪೈಕಿ 2ನೇ ಸ್ಥಾನದಲ್ಲಿದೆ. ವೆಚ್ಚದಲ್ಲಿ ಏರಿಕೆ ಕಂಡುಬಂದಿದೆ ಎಂದರೆ ಜನರ ಜೀವನ ಗುಣಮಟ್ಟದಲ್ಲಿ ಏರಿಕೆ ಕಂಡುಬಂದಿದೆ ಎಂದು ಪರಿಗಣಿಸಲಾಗುತ್ತದೆ.

ಒಡಿಶಾ ನಂ.1:2022-23 ಅವಧಿಯಲ್ಲಿ ನಡೆಸಿದ ಸಮೀಕ್ಷೆಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚು ತಲಾ ಮಾಸಿಕ ವೆಚ್ಚವನ್ನು ಒಡಿಶಾ (ಶೇ.14ರಷ್ಟು ಏರಿಕೆ) ದಾಖಲಿಸಿದರೆ, ನಗರ ಪ್ರದೇಶಗಳಲ್ಲಿ ಪಂಜಾಬ್‌ (ಶೇ.13ರಷ್ಟು ಏರಿಕೆ) ಈ ಸ್ಥಾನ ಪಡೆದಿದೆ. ಒಟ್ಟಾರೆಯಾಗಿ 18 ರಾಜ್ಯಗಳಲ್ಲಿ ಈ ಸಂಖ್ಯೆ ಏರಿಕೆಯಾಗಿದೆ. ಅಂತೆಯೇ, ಮಹಾರಾಷ್ಟ್ರದಲ್ಲಿ ಅತಿ ಕನಿಷ್ಠ (ಶೇ.3ರಷ್ಟು) ಏರಿಕೆಯಾದರೆ, 2ನೇ ಸ್ಥಾನದಲ್ಲಿ ಶೇ.5ರಷ್ಟು ಗೃಹಬಳಕೆ ವೆಚ್ಚ ಏರಿಕೆ ಕಂಡ ಕರ್ನಾಟಕ ಇದೆ.