ಮೊದಲ ಬಾರಿಗೆ ಶೇ.5ಕ್ಕಿಂತ ಕೆಳಗಿಳಿದ ಗ್ರಾಮೀಣ ಬಡತನ - ಎಸ್‌ಬಿಐ ಸಂಶೋಧನಾ ವರದಿಯಲ್ಲಿ ಬಹಿರಂಗ

| Published : Jan 04 2025, 10:11 AM IST

poverty

ಸಾರಾಂಶ

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಯಶಸ್ವಿ ಜಾರಿಯ ಕಾರಣ, ದೇಶದಲ್ಲಿ ಬಡತನ ಪ್ರಮಾಣ ಇಳಿಕೆಯಾಗಿದೆ. ಅದರಲ್ಲೂ ಗ್ರಾಮೀಣ ಬಡತನದಲ್ಲಿ ಭಾರೀ ಇಳಿಕೆ ಕಂಡುಬಂದಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಶೋಧನಾ ವರದಿ ತಿಳಿಸಿದೆ.

ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಯಶಸ್ವಿ ಜಾರಿಯ ಕಾರಣ, ದೇಶದಲ್ಲಿ ಬಡತನ ಪ್ರಮಾಣ ಇಳಿಕೆಯಾಗಿದೆ. ಅದರಲ್ಲೂ ಗ್ರಾಮೀಣ ಬಡತನದಲ್ಲಿ ಭಾರೀ ಇಳಿಕೆ ಕಂಡುಬಂದಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಶೋಧನಾ ವರದಿ ತಿಳಿಸಿದೆ.

2011-12ರಲ್ಲಿ ಶೇ.25.7ರಷ್ಟಿದ್ದ ಗ್ರಾಮೀಣ ಬಡತನ 2024ರ ಮಾರ್ಚ್‌ ವೇಳೆಗೆ ಕೇವಲ ಶೇ.4.86ಕ್ಕೆ ಇಳಿದಿದೆ. ಹೀಗೆ ಬಡತನ ಪ್ರಮಾಣ ಶೇ.5ಕ್ಕಿಂತ ಕೆಳಗೆ ಇಳಿದಿದ್ದು ಇದೇ ಮೊದಲು ಎಂದು ವರದಿ ಹೇಳಿದೆ.

ಎಸ್‌ಬಿಐನ ಬಳಕೆ ವೆಚ್ಚ ವರದಿ ಅನ್ವಯ, 2011-12ರಲ್ಲಿ ನಗರ ಪ್ರದೇಶಗಳ ಬಡತನ ಶೇ.13.7ರಷ್ಟು ಇದ್ದಿದ್ದು 2024ರ ಮಾರ್ಚ್‌ ವೇಳೆಗೆ ಶೇ.4.09ಕ್ಕೆ ಇಳಿಕೆಯಾಗಿದೆ. ಗ್ರಾಮೀಣ ಬಡತನ ಶೇ.25.7ರಿಂದ ಶೇ.4.86ಕ್ಕೆ ಇಳಿದಿದೆ. ಒಟ್ಟಾರೆಯಾಗಿ ನೋಡಿದರೆ ಭಾರತದಲ್ಲಿ ಬಡತನ ಪ್ರಮಾಣ ಶೇ.4-4.5ರಷ್ಟಿದೆ ಎಂದು ವರದಿ ಹೇಳಿದೆ.

ಇಳಿಕೆಗೆ 2 ಕಾರಣ: ಭೌತಿಕ ಮೂಲಸೌಲಭ್ಯಗಳ ಸೃಷ್ಟಿಯಿಂದ ಗ್ರಾಮೀಣ ಪ್ರದೇಶದಲ್ಲೂ ಸಂಚಾರ ವ್ಯವಸ್ಥೆ ಸುಧಾರಿಸುತ್ತಿದೆ. ಇದರಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಂತರ ಕಡಿಮೆಯಾಗುತ್ತಿದ್ದು, ಗ್ರಾಮೀಣ ಆದಾಯ ಅಸಮಾನತೆಯನ್ನೂ ಇದು ಇಳಿಸಲು ಕಾರಣವಾಗುತ್ತಿದೆ.

ಇನ್ನು ಫಲಾನುಭವಿಗಳ ಖಾತೆಗೆ ನೇರ ಹಣ ಸಂದಾಯ(ಡಿಬಿಟಿ) ಹೆಚ್ಚುತ್ತಿರುವುದು ಗ್ರಾಮೀಣ ಮತ್ತು ನಗರಗಳ ನಡುವಿನ ಅಂತರ ಕಡಿಮೆಯಾಗಲು ಮತ್ತೊಂದು ಪ್ರಮುಖ ಕಾರಣ‍ವಾಗಿದೆ. ಇದರಿಂದ ಸೋರಿಕೆ ಕಡಿಮೆಯಾಗಿ ಜನರ ಕೈಗೆ ನೇರವಾಗಿ ಹಣ ಸಿಗುತ್ತಿದ್ದು, ಅವರ ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತಿದೆ ಎಂದು ಸಂಶೋಧನಾ ವರದಿ ಹೇಳಿದೆ.

ಗ್ರಾಮೀಣ ಪ್ರದೇಶಗಳ ಬಡತನ ರೇಖೆಗೆ 1632 ರು. ಮಾನದಂಡವಾಗಿ ಪರಿಗಣಿಸಿದ್ದರೆ, ನಗರ ಪ್ರದೇಶಗಳಲ್ಲಿ ಇದಕ್ಕೆ 1944 ರು.ಗಳನ್ನು ಮಾನದಂಡವಾಗಿ ಬಳಸಲಾಗಿತ್ತು.