ಸಾರಾಂಶ
ಕೀವ್/ ಮಾಸ್ಕೋ: ಸಂಧಾನದ ಕಸರತ್ತಿನ ನಡುವೆಯೇ ರಷ್ಯಾ- ಉಕ್ರೇನ್ ಭಾನುವಾರವೂ ಪರಸ್ಪರ ದಾಳಿ ಮುಂದುವರೆದಿದೆ. ಈವರೆಗಿನ ಅತಿ ಭೀಕರ ಏಕದಿನದ ದಾಳಿಯಲ್ಲಿ ಉಕ್ರೇನ್ ಮೇಲೆ ರಷ್ಯಾ 805 ಡ್ರೋನ್‌ಗಳನ್ನು ಬಳಸಿ ದಾಳಿ ಮಾಡಿದೆ. ಇದರ ಪರಿಣಾಮ ರಾಜಧಾನಿ ಕೀವ್‌ನಲ್ಲಿನ ಕ್ಯಾಬಿನೆಟ್ ಕಟ್ಟಡಕ್ಕೆ ಹಾನಿಯಾಗಿದೆ. ಇದು ಯುದ್ಧ ಆರಂಭವಾದ ಬಳಿಕ ಸರ್ಕಾರಿ ಕಟ್ಟಡದ ಮೇಲೆ ನಡೆದ ಮೊದಲ ದಾಳಿ ಆಗಿದೆ.
ಇತ್ತ ಉಕ್ರೇನ್ ಕೂಡ ತಿರುಗೇಟು ನೀಡಿದ್ದು, ಡ್ರೋನ್ ಹಾಗೂ ಕ್ಷಿಪಣಿಗಳನ್ನು ಹಾರಿಸಿ ರಷ್ಯಾದ ಡ್ರುಜ್ಬಾ ತೈಲ ಪೈಪ್‌ಲೈನ್ ನಾಶ ಮಾಡಿದ್ದು, ಅಪಾರ ನಷ್ಟ ಸಂಭವಿಸಿದೆ.
ರಷ್ಯಾ ಭಾರಿ ದಾಳಿ:
ಕಳೆದ ರಾತ್ರಿ ರಷ್ಯಾ ಉಕ್ರೇನ್ ಮೇಲೆ 805 ಡ್ರೋನ್‌ಗಳು, 13 ಕ್ಷಿಪಣಿ, ಡಿಕಾಯ್‌ಗಳನ್ನು ಬಳಸಿ ದಾಳಿ ಮಾಡಿದೆ. ಇದು ಇದುವರೆಗಿನ ಯುದ್ಧದ ಅತಿ ಭೀಕರ ದಾಳಿಯಾಗಿದೆ.
ಈ ಪೈಕಿ ಉಕ್ರೇನ್ 747 ಡ್ರೋನ್, 4 ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಉಕ್ರೇನ್‌ನಾದ್ಯಂತ 37 ಸ್ಥಳಗಳಲ್ಲಿ ರಷ್ಯಾದ 56 ಡ್ರೋನ್‌ಗಳು ಅಪ್ಪಳಿಸಿದ್ದು, 8 ಸ್ಥಳಗಳ ಮೇಲೆ ಬಿದ್ದಿದೆ. ಈ ದಾಳಿಯಲ್ಲಿ ಒಂದು ವರ್ಷದ ಮಗು ಸೇರಿದಂತೆ ಕನಿಷ್ಠ ಮೂವರು ಉಕ್ರೇನಿಯರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಷ್ಯಾ ಉಕ್ರೇನ್ ಕ್ಯಾಬಿನೆಟ್ ಕಟ್ಟಡದ ಮೇಲೆ ದಾಳಿ ಮಾಡಿದ್ದು, ಕಟ್ಟಡದ ಮೇಲ್ಭಾಗದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ.