ಸಾರಾಂಶ
ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಅವರ ಈಶ ಫೌಂಡೇಶನ್ ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳ ವರದಿ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ. ಅದರ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ 150 ಜನ ಪೊಲೀಸರ ತಂಡ ಮಂಗಳವಾರ ಇಲ್ಲಿನ ಈಶ ಆಶ್ರಮದ ಮೇಲೆ ದಾಳಿ ನಡೆಸಿದೆ.ಹೆಣ್ಣುಮಕ್ಕಳಿಗೆ ಸನ್ಯಾಸ ಸ್ವೀಕರಿಸುವಂತೆ ಈಶ ಸಂಸ್ಥೆ ಒತ್ತಾಯಿಸುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಫೌಂಡೇಷನ್ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣಗಳ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅದರ ಬೆನ್ನಲ್ಲೇ ಭಾರೀ ಬಿಗಿ ಭದ್ರತೆಯಲ್ಲಿ ದಾಳಿ ನಡೆಸಲಾಗಿದೆ.ಪ್ರಕರಣ ಹಿನ್ನೆಲೆ:ನನ್ನ ಇಬ್ಬರು ವಿವಾಹಿತ ಹೆಣ್ಣುಮಕ್ಕಳ ಬ್ರೈನ್‌ವಾಶ್ ಮಾಡಿ, ಪರಿವಾರದೊಂದಿಗಿನ ಸಂಬಂಧ ಕಡಿದುಕೊಂಡು ಈಶ ಸಂಸ್ಥೆಯಲ್ಲೇ ಉಳಿಯುವಂತೆ ಒತ್ತಾಯಿಸಲಾಗಿತ್ತು ಎಂದು ಪ್ರಾಧ್ಯಾಪಕ ಎಸ್. ಕಾಮರಾಜ್ ಎನ್ನುವವರು ದೂರು ಸಲ್ಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ‘ತನ್ನ ಮಕ್ಕಳಿಗೆ ಮದುವೆ ಮಾಡಿಸಿದ ಸದ್ಗುರು ಅನ್ಯರ ಮಕ್ಕಳಿಗೆ ಸನ್ಯಾಸತ್ವ ಸ್ವೀಕರಿಸಲು ಏಕೆ ಪ್ರೋತ್ಸಾಹಿಸುತ್ತಿದ್ದಾರೆ?’ ಎಂದು ಪ್ರಶ್ನಿಸಿತ್ತು.
ಆದರೆ ಈ ಆರೋಪ ತಳ್ಳಿಹಾಕಿದ ಈಶ ಪರ ವಕೀಲರು, ನಮ್ಮ ನಾವು ಯಾರಿಗೂ ಸನ್ಯಾಸತ್ವ ಸ್ವೀಕಾರಕ್ಕಾಗಲೀ ಅಥವಾ ಮದುವೆಗಾಗಲೀ ಸಲಹೆ ನೀಡುವುದಿಲ್ಲ. ಏಕೆಂದರೆ ಇವೆಲ್ಲಾ ವೈಯಕ್ತಿಕ ವಿಷಯ. ಸಂಸ್ಥೆಯನ್ನು ಕೇವಲ ಯೋಗ ಮತ್ತು ಅಧ್ಯಾತ್ಮದ ಪ್ರಚಾರಕ್ಕಾಗಿ ಸ್ಥಾಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.ಈ ನಡುವೆ ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದ ಕಾಮರಾಜ್ ಅವರ ಇಬ್ಬರೂ ಪುತ್ರಿಯರೂ ನಾವು ಸ್ವ ಇಚ್ಛೆಯಿಂದ ಈಶ ಸಂಸ್ಥೆಯಲ್ಲಿ ಇರುವುದಾಗಿ ಹೇಳಿಕೆ ನೀಡಿದರು. ಇದಾದ ಬಳಿಕ ಈಶ ಫೌಂಡೇಷನ್ ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳ ಕುರಿತು ವರದಿ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.