ಸಾರಾಂಶ
ಮುಂಬೈ: ಬಾಂಗ್ಲಾ ಮೂಲದ ದಾಳಿಕೋರನಿಂದ ಚೂರಿ ಇರಿತಕ್ಕೊಳಗಾಗಿ ಮುಂಬೈನ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆ ಸೇರಿದ್ದ ನಟ ಸೈಫ್ ಅಲಿ ಖಾನ್ ಮೆಡಿಕಲ್ ಬಿಲ್ 36 ಲಕ್ಷ ರು. ಆಗಿದೆ ಎನ್ನಲಾಗಿದೆ.
ಈ ಹಣವನ್ನು ಅವರು ಆರೋಗ್ಯ ವಿಮಾ ಕಂಪನಿಗಳಲ್ಲಿ ಕ್ಲೇಂ ಮಾಡಲು ಅರ್ಜಿ ಹಾಕಿದ್ದಾರೆ. ಈ 36 ಲಕ್ಷ ರು. ಪೈಕಿ ವಿಮಾ ಕಂಪನಿಯು 25 ಲಕ್ಷ ರು.ಗಳನ್ನು ಸಹ ಅನುಮೋದಿಸಿದೆ ಎಂದು ಎಂದು ವರದಿಗಳು ಹೇಳಿವೆ. ಅಲ್ಲದೆ, ಅವರ ಆರೋಗ್ಯ ವಿಮೆ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ.ಈ ದಾಖಲೆಗಳು ಬೆಳಕಿಗೆ ಬಂದ ನಂತರ ಮುಂಬೈನ ಹಾರ್ಟ್ ಸರ್ಜನ್ ಡಾ. ಪ್ರಶಾಂತ್ ಮಿಶ್ರಾ ಅವರು ವಿಮಾ ಕಂಪನಿಗಳ ನಡೆ ಮೇಲೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ‘ಸಣ್ಣ ಆಸ್ಪತ್ರೆಗಳು ಮತ್ತು ಸಾಮಾನ್ಯ ಜನರಿಗೆ, ವಿಮಾ ಕಂಪನಿಯು 5 ಲಕ್ಷ ರು.ಗಿಂತ ಹೆಚ್ಚಿನ ಕ್ಲೈಮ್ ಅನ್ನು ಎಂದಿಗೂ ನೀಡುವುದಿಲ್ಲ. ಆದರೆ ಸೆಲೆಬ್ರಿಟಿಗಳನ್ನು ದಾಖಲಿಸಿಕೊಂಡು ಲಕ್ಷಗಟ್ಟಲೆ ಕೆಲವು ಆಸ್ಪತ್ರೆಗಳು ಬಿಲ್ ಮಾಡುತ್ತಿವೆ. ಇಷ್ಟು ಹಣವನ್ನು ವಿಮಾ ಕಂಪನಿ ಹೇಗೆ ಅನುಮೋದಿಸಿದೆ? ಜನಸಾಮಾನ್ಯರಿಗೆ ಒಂದು ನೀತಿ, ಸೆಲೆಬ್ರಿಟಿಗಳಿಗೆ ಇನ್ನೊಂದು ನೀತಿಯೇ’ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ‘ಸೀಮಿತ ಜನರಿಗೆ ಇಷ್ಟು ಹಣವನ್ನು ವಿಮಾ ಕಂಪನಿಗಳು ನೀಡುತ್ತಿರುವ ಕಾರಣ- ಪ್ರೀಮಿಯಂಗಳು ಹೆಚ್ಚುತ್ತಿವೆ ಮತ್ತು ಮಧ್ಯಮ ವರ್ಗದವರು ಬಳಲುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.5 ದಿನ ಬಳಿಕ ಆಸ್ಪತ್ರೆಯಿಂದ ಸೈಫ್ ಬಿಡುಗಡೆಮುಂಬೈ: ಚಾಕು ಇರಿತದಿಂದ ಗಾಯಗೊಂಡು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕಳೆದ 5 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ನಟ ಸೈಫ್ ಅಲಿಖಾನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯ ವೈದ್ಯರು ಅವರನ್ನು ಕೆಲ ದಿನಗಳ ಕಾಲ ಮನೆಯಲ್ಲಿಯೇ ವಿಶ್ರಾಂತಿಗೆ ಸೂಚಿಸಿದ್ದಾರೆ.
ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾದ ಸೈಫ್ ಬಾಂದ್ರಾದಲ್ಲಿರುವ ಸದ್ಗುರು ಶರಣ್ ನಿವಾಸಕ್ಕೆ ಮರಳಿದರು. ಈ ವೇಳೆ ಕುತ್ತಿಗೆ ಮತ್ತು ಕೈಗೆ ಅವರು ಬ್ಯಾಂಡೇಜ್ ಹಾಕಿದ್ದು ಕಂಡುಬಂತು. ಆದರೆ ಯಾವುದೇ ಆಯಾಸ, ಬಳಲಿಕೆಯ ಲಕ್ಷಣ ಅವರಲ್ಲಿ ಕಂಡುಬರಲಿಲ್ಲ. ಆರೋಗ್ಯವಂತನಂತೆ ಅವರು ಮನೆ ಪ್ರವೇಶ ಮಾಡಿದ್ದು ಹಾಗೂ ಪತ್ರಕರ್ತರತ್ತ ಕೈಬೀಸಿದ್ದು ವಿಶೇಷವಾಗಿತ್ತು.ಜ.16ರಂದು ಬಾಂಗ್ಲಾದೇಶಿ ವ್ಯಕ್ತಿಯಿಂದ ಇರಿತಕ್ಕೊಳಗಾಗಿದ್ದ ಸೈಫ್ ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಕೈ, ಕುತ್ತಿಗೆ, ಹಾಗೂ ಬೆನ್ನಿನ ಭಾಗದಲ್ಲಿ ಗಾಯಗಳಾಗಿತ್ತು. ಅದರಲ್ಲಿಯೂ ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿತ್ತು. 1 ದಿನ ಐಸಿಯುನಲ್ಲಿದ್ದ ಅವರನ್ನು ನಂತರ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ವೈದ್ಯರು ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಿದ ಪರಿಣಾಮ ಸೈಫ್ ಚೇತರಿಸಿಕೊಂಡಿದ್ದಾರೆ.
7 ತಿಂಗಳ ಹಿಂದೆ ಭಾರತಕ್ಕೆ ನುಸುಳಿದ್ದ ಶೆಹಜಾದ್ಮುಂಬೈ: ನಟ ಸೈಫ್ ಅಲಿಖಾನ್‌ಗೆ ಚಾಕು ಇರಿತ ಪ್ರಕರಣದಲ್ಲಿ ಬಂಧನವಾಗಿರುವ ಬಾಂಗ್ಲಾ ಪ್ರಜೆ ಶೆಹಜಾದ್ 7 ತಿಂಗಳ ಹಿಂದಷ್ಟೇ ಭಾರತಕ್ಕೆ ಮೇಘಾಲಯದ ಡಾಕಿ ನದಿ ಮೂಲಕ ಅಕ್ರಮವಾಗಿ ನುಸುಳಿದ್ದ. ಇಲ್ಲಿ ತನ್ನ ಗುರುತು ಬದಲಿಸಿಕೊಂಡಿದ್ದನು ಎನ್ನುವ ಸಂಗತಿ ಪೊಲೀಸ್ ವಿಚಾರಣೆ ವೇಳೆ ಹೊರ ಬಿದ್ದಿದೆ.ಶೆಹಜಾದ್ ಅಕ್ರಮವಾಗಿ ನುಸುಳಿ ಹೆಸರನ್ನು ವಿಜಯ್ ದಾಸ್ ಎಂದು ಬದಲಿಸಿಕೊಂಡಿದ್ದ. ಕೆಲ ವೇಳೆ ಪ.ಬಂಗಾಳದಲ್ಲಿ ತಂಗಿದ್ದ. ಆದರೆ ಆಧಾರ್ ಕಾರ್ಡ್ ಪಡೆಯುಲು ವಿಫಲನಾಗಿದ್ದ. ಆ ಬಳಿಕ ಉದ್ಯೋಗ ಅರಸಲು ಮುಂಬೈಗೆ ಬರುವಾಗ ಬಂಗಾಳ ನಿವಾಸಿಯೊಬ್ಬರ ಆಧಾರ್ ಕಾರ್ಡ್‌ನಿಂದ ಸಿಮ್ ಖರೀದಿ ಮಾಡಿದ್ದ ಎನ್ನುವುದು ತಿಳಿದು ಬಂದಿದೆ.ಅಲ್ಲದೇ ಆತನ ಮೊಬೈಲ್ ಪರಿಶೀಲನೆ ವೇಳೆ ಆತ ಬಾಂಗ್ಲಾದೇಶಕ್ಕೆ ಹಲವಾರು ಕರೆಗಳನ್ನು ಮಾಡಿದ್ದಾನೆ. ನೆರೆಯ ದೇಶದಲ್ಲಿರುವ ಅವನ ಕುಟುಂಬಕ್ಕೆ ಕರೆ ಮಾಡಲು ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.