ಸಾರಾಂಶ
ಮುಂಬೈ: ‘ಚೂರಿ ಇರಿತಕ್ಕೊಳಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಸೈಫ್ ಅಲಿ ಖಾನ್ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡು ಬಂದಿದ್ದು, 2-3 ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು’ ಎಂದು ಲೀಲಾವತಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಸೈಫ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ನ್ಯೂರೋ ಸರ್ಜನ್ ನಿತಿನ್ ಡಾಂಗೆ, ‘ನಮ್ಮ ನಿರೀಕ್ಷೆಯಂತೆ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. . ಐಸಿಯುನಿಂದ ವಾರ್ಡ್‌ಗೆ ಶಿಫ್ಟ್ ಮಾಡಿದ್ದೇವೆ. ವಿಶ್ರಾಂತಿಗೆ ಸೂಚಿಸಿದ್ದೇವೆ. ಈ ಕಾರಣಕ್ಕಾಗಿಯೇ ಇತರರ ಭೇಟಿಗೆ ನಿರ್ಬಂಧಿಸಿದ್ದೇವೆ. ಅವರು ಗುಣಮುಖರಾಗಿದ್ದು 2-3 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಿದ್ದೇವೆ’ ಎಂದರು.
ರಕ್ತಸಿಕ್ತವಾಗಿದ್ದರೂ ಹುಲಿಯಂತೆ ಬಂದರು: ಆಸ್ಪತ್ರೆಗೆ ಗಾಯಗಳೊಂದಿಗೆ ನಟ ಬಂದಿದ್ದ ಸಂದರ್ಭವನ್ನು ವಿವರಿಸಿದ ವೈದ್ಯರು,‘ರಕ್ತಸಿಕ್ತವಾಗಿ ಗಾಯಗೊಂಡಿದ್ದರೂ ಸೈಫ್ ಹುಲಿಯಂತೆ ಆಸ್ಪತ್ರೆಗೆ ನಡೆದು ಬಂದರು. ಅವರು ನಿಜವಾದ ಹೀರೋ’ ಎಂದರು.
ಸೈಫ್ ದೇಹ ಹೊಕ್ಕಿದ್ದ 2.5 ಇಂಚು ಚಾಕು ಫೋಟೋ ಲಭ್ಯ!
ಮುಂಬೈ: ‘ಸೈಫ್ ಬೆನ್ನಿಗೆ ದಾಳಿಕೋರ ಹಾಕಿದ್ದ ಚಾಕು 2.5 ಇಂಚಿನಷ್ಟು ಮುರಿದು ಒಳಹೊಕ್ಕಿತ್ತು. ಮುರಿದ ಚಾಕುವನ್ನು ಹೊರತೆಗೆಯಲಾಗಿದೆ. ಇನ್ನೂ 2 ಮಿ.ಮೀ. ಒಳಗೆ ಹೋಗಿದ್ದರೆ ಬೆನ್ನು ಮೂಳೆಗೆ ಏಟು ಆಗುತ್ತಿತ್ತು. ಸುದೈವವಶಾತ್ ಹೀಗಾಗದೇ ಅಪಾಯದಿಂದ ಪಾರಾಗಿದ್ದಾರೆ’ ಎಂದು ಲೀಲಾವತಿ ಆಸ್ಪತ್ರೆ ಹೇಳಿದ್ದಾರೆ.‘ಅವರು ತುಂಬಾ ಅದೃಷ್ಟವಂತರು. ಸೋರುತ್ತಿರುವ ಬೆನ್ನು ಮೂಳೆಯ ದ್ರವ ಮತ್ತು ಅಲ್ಲಿಂದ ಡ್ಯೂರಾವನ್ನು ಸರಿಪಡಿಸಿದ್ದೇವೆ. ಅವರನ್ನು ನಡೆಯುವಂತೆ ಮಾಡಿದಾಗ ಅವರು ನಡೆಯಲು ಸಂಪೂರ್ಣ ಶಕ್ತರಾಗಿದ್ದಾರೆ’ ಎಂದರು.
ಇನ್ನೂ ಸಿಗದ ಸೈಫ್ ದಾಳಿಕೋರ
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ದಾಳಿ ಮಾಡಿದ ಆರೋಪಿ 2 ದಿನವಾದರೂ ಪೊಲೀಸರ ಕೈಗೆ ಸಿಗದೇ ತಲೆನೋವಾಗಿ ಪರಿಣಮಿಸಿದ್ದಾನೆ.
ಶುಕ್ರವಾರ ಬೆಳಗ್ಗೆ ಸೈಫ್ ಮೇಲಿನ ದಾಳಿಕೋರನನ್ನೇ ಹೋಲುತ್ತಾನೆ ಎಂಬ ಕಾರಣಕ್ಕೆ 2 ದಿನ ಹಿಂದೆಯಷ್ಟೇ, ಅವರ ಮನೆಯಲ್ಲಿ ಕೆಲಸ ಮಾಡಿದ್ದ ಬಡಗಿ ವಾರಿಸ್ ಅಲಿ ಸಲ್ಮಾನಿ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಆತನ ಪಾತ್ರ ಇಲ್ಲ ಎಂದು ಅರಿತು ಬಿಡುಗಡೆ ಮಾಡಿದ್ದಾರೆ. ಬಳಿಕ, ‘ಸೈಫ್ ಕೇಸಿನಲ್ಲಿ ಯಾರನ್ನೂ ವಶಕ್ಕೆ ಪಡೆದಿಲ್ಲ’ ಎಂದು ಪೊಲೀಸರು ಸಂಜೆ ಸ್ಪಷ್ಟಪಡಿಸಿದ್ದಾರೆ.
ಆರೋಪಿಯ ಬಂಧಿಸಲು 20 ತಂಡ ರಚನೆ:
ದಾಳಿಕೋರನನ್ನು ಬಂಧಿಸುವ ಸಲುವಾಗಿ ಮುಂಬೈ ನಗರ ಪೊಲೀಸರ 20 ತಂಡಗಳನ್ನು ರಚಿಸಲಾಗಿದೆ. ಕ್ರೈಂ ಬ್ರಾಂಚ್ ಹಾಗೂ ಸ್ಥಳೀಯ ಪೊಲೀಸರು, ದಾಳಿ ವೇಳೆ ಸಕ್ರಿಯವಾಗಿದ್ದ ಮೊಬೈಲ್‌ಗಳು ಸೇರಿದಂತೆ ಹಲವು ತಾಂತ್ರಿಕ ಅಂಕಿಅಂಶಗಳನ್ನು ಕಲೆಹಾಕುತ್ತಿದ್ದಾರೆ. ಜತೆಗೆ, ನಟ ಸೈಫ್‌ರ ಮನೆಯಲ್ಲಿ ಶ್ವಾನ ಪಡೆಯ ಸಹಾಯದೊಂದಿಗೆ ವಿಧಿವಿಜ್ಞಾನ ತಂಡ ಕೆಲ ಸಾಕ್ಷಿಗಳನ್ನು ಸಂಗ್ರಹಿಸಿದ್ದು, ನಗರದ ಹಲವು ಕಡೆಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಬಾಂದ್ರಾದಲ್ಲಿರುವ ನಟ ಸೈಫ್‌ರ ಮನೆಯೊಳಗೆ ನುಸುಳಿದ್ದ ಆಗಂತುಕ, ಗುರುವಾರ ರಾತ್ರಿ 2:30 ಸುಮಾರಿಗೆ ಅವರ ಮೇಲೆ ಚಾಕುವಿನಿಂದ 6 ಬಾರಿ ದಾಳಿ ನಡೆಸಿದ್ದ. ಕೂಡಲೇ ಸೈಫ್‌ರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸೈಫ್ ದಾಳಿಕೋರನ ಮತ್ತೊಂದು ಚಿತ್ರ ರಿಲೀಸ್
ಮುಂಬೈ: ನಟ ಸೈಫ್ ಅಲಿಖಾನ್‌ಗೆ ಚಾಕು ಇರಿದಿದ್ದ ಆರೋಪಿಯ ಮತ್ತೊಂದು ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದ್ದು, ನಟನ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಹಲ್ಲೆ ನಡೆಸಿದ ಬಳಿಕ ದರೋಡೆಕೋರ ಬಟ್ಟೆ ಬದಲಿಸಿರುವುದು ಕಂಡಬಂದಿದೆ.ಅಪಾರ್ಟ್‌ಮೆಂಟ್‌ನಿಂದ ಪರಾರಿಯಾದ ಬಳಿಕ ಆರೋಪಿ ಬಟ್ಟೆ ಬದಲಿಸಿ, ನೀಲಿ ಶರ್ಟ್ ಧರಿಸಿ ಬಾಂದ್ರಾದ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಇದಕ್ಕೂ ಮುನ್ನ ಆರೋಪಿಗೆ ಸಂಬಂಧಿಸಿದ ಮತ್ತೊಂದು ಸಿಸಿಟೀವಿ ದೃಶ್ಯ ವೈರಲ್ ಆಗಿತ್ತು. ಅದರಲ್ಲಿ ಆರೋಪಿ ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ನಟನ ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸುತ್ತಿರುವುದು ಸೆರೆಯಾಗಿತ್ತು.
ಶಾರುಖ್ ಮನೆ ಮೇಲೂ ದಾಳಿಗೆ ಸಂಚು ರೂಪಿಸಿದ್ದ ಆರೋಪಿ?
ಮುಂಬೈ: ಸೈಫ್ ಅಲಿಖಾನ್ ಅವರ ಸದ್ಗುರು ಶರಣ್ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಚಾಕು ಇರಿಯುವುದಕ್ಕೂ ಮುನ್ನ ಆರೋಪಿ ನಟ ಶಾರುಖ್ ಅವರ ನಿವಾಸ ‘ಮನ್ನತ್’ ಮೇಲೆಯೂ ದಾಳಿಗೆ ಸಂಚು ರೂಪಿಸಿದ್ದನು ಎನ್ನುವ ಮಾಹಿತಿಯನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಪೊಲೀಸ್ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಜ.14ರಂದು ಮುಂಬೈನಲ್ಲಿರುವ ಶಾರುಖ್ ಖಾನ್ ಅವರ ನಿವಾಸದ ಬಳಿ ಅನುಮಾನಸ್ಪದ ವ್ಯಕ್ತಿಯೊಬ್ಬರ ಚಲನವಲನಗಳು ಕಂಡು ಬಂದಿದೆ. ಮನ್ನತ್ ನಿವಾಸದ ಪಕ್ಕದಲ್ಲಿರುವ ರಿಟ್ರೀಟ್ ಹೌಸ್‌ನ ಹಿಂಭಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ 6-8 ಅಡಿ ಉದ್ದದ ಕಬ್ಬಿಣ ಏಣಿಯನ್ನು ಹತ್ತಿ, ಶಾರುಖ್ ಮನೆಯ ಆವರಣಗಳನ್ನು ಪರಿಶೀಲಿಸಿರುವುದು ಬಹಿರಂಗವಾಗಿದೆ. ಈ ವ್ಯಕ್ತಿಗೂ ಹಾಗೂ ಸೈಫ್‌ಗೆ ಇರಿದ ವ್ಯಕ್ತಿಗೂ ಹೋಲಿಕೆ ಕಂಡು ಬಂದಿದ್ದು, ಪೊಲೀಸರು ಆ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಶಾರುಖ್ ಯಾವುದೇ ದೂರು ದಾಖಲಿಸಿಲ್ಲವಾದರೂ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುತ್ತಿದ್ದಾರೆ.
ಆಟೋದಲ್ಲಿ ಅವರು ಸೈಫ್ ಎಂದು ಗೊತ್ತಾಗ್ಲೇ ಇಲ್ಲ: ಚಾಲಕ
ಮುಂಬೈ: ಆಗಂತುಕನ ದಾಳಿಗೆ ತುತ್ತಾಗಿ ತೀವ್ರವಾಗಿ ಗಾಯಗೊಂಡಿದ್ದ ಸೈಫ್ ಅಲಿಖಾನ್ ಅವರನ್ನು ಆಟೋದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದಿದ್ದು ಅವರ ಹಿರಿಯ ಮಗ ಇಬ್ರಾಹಿಂ ಅಲ್ಲ, ಕಿರಿ ಮಗ ತೈಮುರ್ ಎಂದು ಆಟೋ ಚಾಲಕ ಭಜನ್ ಸಿಂಗ್ ರಾಣಾ ಹೇಳಿದ್ದಾರೆ.
‘ಮಹಿಳೆಯೊಬ್ಬರು ಓಡಿ ಬಂದು ಆಟೋ ಆಟೋ ಎಂದು ಕೂಗಿದರು. ಆಗ ಸಣ್ಣ ಬಾಲಕನೊಬ್ಬ ಆಟೋದಲ್ಲಿ, ರಕ್ತಸಿಕ್ತನಾಗಿದ್ದ ವ್ಯಕ್ತಿ ಜತೆ ಆಟೋ ಏರಿದ. ಲೀಲಾವತಿ ಆಸ್ಪತ್ರೆಗೆ ಹೋಗಿ ಎಂದು ರಕ್ತಸಿಕ್ತನಾಗಿದ್ದ ವ್ಯಕ್ತಿ ಹೇಳಿದ. ಆಸ್ಪತ್ರೆ ಬಂದಾಗ ‘ಸ್ಟ್ರೆಚರ್ ತೆಗೆದುಕೊಂಡು ಬನ್ನಿ. ನಾನು ಸೈಫ್ ಅಲಿ ಖಾನ್’ ಎಂದು ರಕ್ತಸಿಕ್ತ ವ್ಯಕ್ತಿ ಹೇಳಿದ. ಆಗಲೇ ನನಗೆ ಅವರು ಸೈಫ್ ಎಂದು ಗೊತ್ತಾಯಿತು’ ಎಂದು ಭಜನ್ ತಿಳಿಸಿದ್ದಾರೆ.ತಕ್ಷಣವೇ ಕಾರು ಚಾಲಕ ಮಧ್ಯರಾತ್ರಿ ಸಿದ್ಧ ಇರದ ಕಾರಣ ಆಟೋದಲ್ಲಿ ಸೈಫ್ ಆಸ್ಪತ್ರೆಗೆ ತೆರಳಿದ್ದರು.
ಸೈಫ್ ಮೇಲೆ ಹಲ್ಲೆಗೆ ಕಳ್ಳತನ ಉದ್ದೇಶವೇ ಕಾರಣ: ಮಹಾರಾಷ್ಟ್ರ ಗೃಹ ಸಚಿವ
ಪುಣೆ: ‘ನಟ ಸೈಫ್ ಅಲಿಖಾನ್ ಅವರ ಮನೆ ಮೇಲೆ ದಾಳಿ ನಡೆಸುವುದಕ್ಕೆ ಆರೋಪಿಗೆ ಕಳ್ಳತನವೊಂದೇ ಉದ್ದೇಶವಾಗಿತ್ತು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣ ಇಲ್ಲ’ ಎಂದು ಮಹಾರಾಷ್ಟ್ರದ ಗೃಹ ಖಾತೆ ರಾಜ್ಯ ಸಚಿವ ಯೋಗೇಶ್ ಕದಂ ಹೇಳಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಕದಂ, ‘ಸೈಫ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗೆ ಕ್ರಿಮಿನಲ್ ಕಳ್ಳತನವೊಂದೇ ಉದ್ದೇಶವಾಗಿತ್ತು. ಬೇರೆ ಯಾವುದೇ ಆಯಾಮಗಳಿಲ್ಲ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ’ ಎಂದಿದ್ದಾರೆ.ಅಲ್ಲದೆ, ಸೈಫ್ ತಮಗೆ ಬೆದರಿಗೆ ಇದೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ.