ಸಾರಾಂಶ
ಮುಂಬೈ: ಇಲ್ಲಿನ ಹಡಗುಕಟ್ಟೆಯಲ್ಲಿ ರಿಪೇರಿಯ ವೇಳೆ ಐಎನ್‌ಎಸ್ ಬ್ರಹ್ಮಪುತ್ರ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರ ನಾವಿಕ ನಾಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ. ಜು.21ರ ಸಂಜೆ ಹಡಗಿನ ಮರುಜೋಡಣೆ ನಡೆಯುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ನೆರವಿನೊಂದಿಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು.
ನಂತರ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಲಾಯಿತು. ಸೋಮವಾರ ಮದ್ಯಾಹ್ನ ಹಡಗು ಬಂದರಿನ ಕಡೆ ವಾಲತೊಡಗಿದ್ದು, ಅದನ್ನು ಯತಾಸ್ಥಿತಿಗೆ ತರಲು ಸಾಧ್ಯವಾಗಲಿಲ್ಲ. ಕಾಣೆಯಾಗಿರುವ ಕಿರಿಯ ನಾವಿಕನಿಗಾಗಿ ಹುಡುಕಾಟ ನಡೆಯುತ್ತಿದ್ದು, ಉಳಿದವರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೀಸಲು ಪ್ರಮಾಣ ಇಳಿದರೂ ನಿಲ್ಲದ ಪ್ರತಿಭಟನೆ: 2 ದಿನ ಬಾಂಗ್ಲಾದೇಶ ಬಂದ್‌ಗೆ ಕರೆ
ಢಾಕಾ: ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗದಲ್ಲಿ ನೀಡುತ್ತಿದ್ದ ಮೀಸಲು ಪ್ರಮಾಣವನ್ನು ಸುಪ್ರೀಂಕೋರ್ಟ್ ಶೇ.30ರಿಂದ ಶೇ.5ಕ್ಕೆ ಇಳಿಸಿದರೂ, ವಿದ್ಯಾರ್ಥಿಗಳು ಪ್ರತಿಭಟನೆ ಸ್ಥಗಿತಕ್ಕೆ ನಿರಾಕರಿಸಿದ್ದಾರೆ. ಮೀಸಲು ಕಡಿತ ಕುರಿತು ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು, ಪ್ರತಿಭಟನೆ ವೇಳೆ ಬಂಧಿತ ವಿದ್ಯಾರ್ಥಿಗಳ ಬಿಡುಗಡೆ ಮಾಡಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆ ಈಡೇರಿಸುವವರೆಗೂ ಹೋರಾಟ ಮುಂದುವರೆಸಲು ನಿರ್ಧರಿಸಿದ್ದಾರೆ.
ಜೊತೆಗೆ ಸೋಮವಾರದಿಂದ ಎರಡು ದಿನ ದೇಶವ್ಯಾಪಿ ಬಂದ್‌ಗೆ ಕರೆಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಅನಿರ್ದಿಷ್ಟಾವದಿಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ದೇಶದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈವರೆಗೆ 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 500 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಅಂದಾಜು 3 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು, ಯುವಸಮೂಹ ಕಳೆದೊಂದು ವಾರದಿಂದ ಶೈಕ್ಷಣಿಕ ಚಟುವಟಿಕೆ, ಉದ್ಯೋಗ ತೊರೆದು ಹೋರಾಟ ನಡೆಸುತ್ತಿದೆ.
ಈ ವರ್ಷದ 5 ತಿಂಗಳಲ್ಲಿ 7,030 ದೇಶೀಯ ವಿಮಾನ ಸಂಚಾರ ರದ್ದು
ನವದೆಹಲಿ: ದೇಶೀಯ ವಿಮಾನಯಾನ ಸಂಸ್ಥೆಗಳು ಈ ವರ್ಷದ ಮೊದಲ 5 ತಿಂಗಳ ಅವಧಿಯಲ್ಲಿ ಒಟ್ಟು 7,030 ನಿಗದಿತ ವಿಮಾನ ಸಂಚಾರ ರದ್ದುಗೊಳಿಸಿವೆ. ಸೋಮವಾರ ನಾಗರಿಕ ವಿಮಾನಯಾನ ಸಚಿವಾಲಯದ ಸಚಿವರು ರಾಜ್ಯಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳ ಪ್ರಕಾರ, 2024ರಲ್ಲಿ ದೇಶೀಯ ವಿಮಾನಗಳು 4.56 ಲಕ್ಷ ಸಂಚಾರ ನಡೆಸಬೇಕಿದೆ. 2022ರಲ್ಲಿ ಒಟ್ಟು 6413 ವಿಮಾನಗಳು ರದ್ದಾಗಿದ್ದವು, ಅದೇ ರೀತಿ 2023ರಲ್ಲಿ 7,427ಕ್ಕೆ ಏರಿಕೆಯಾಗಿತ್ತು.
ಏಕರೂಪ ನಾಗರಿಕ ಸಂಹಿತೆ ಇಂದಿನ ಅಗತ್ಯ: ಮ.ಪ್ರದೇಶ ಹೈಕೋರ್ಟ್ ಜಡ್ಜ್ ಅಭಿಮತ
ಭೋಪಾಲ್: ಎಲ್ಲಾ ಧರ್ಮೀಯಕರಿಗೂ ವಿವಾಹ, ಆಸ್ತಿ, ಉತ್ತರದಾಯಿತ್ವ, ಡೈವೋರ್ಸ್ ವಿಷಯದಲ್ಲಿ ಒಂದೇ ರೀತಿಯ ಕಾನೂನಿಗೆ ಅವಕಾಶ ಮಾಡಿಕೊಡುವ ಏಕರೂಪ ನಾಗರಿಕ ಸಂಹಿತೆ ಜಾರಿಯ ಪರ ಮಧ್ಯಪ್ರದೇಶದ ಹೈಕೋರ್ಟ್ ನ್ಯಾಯಮೂರ್ತಿ ಅನಿಲ್ ವರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಬ್ಬರು ಮುಸ್ಲಿಂ ಮಹಿಳೆಯರ ಪ್ರಕರಣ ವಿಚಾರಣೆ ವೇಳೆ ‘ನಂಬಿಕೆ ಮತ್ತು ನಂಬಿಕೆಯ ಹೆಸರಿನಲ್ಲಿ ಸಮಾಜದಲ್ಲಿ ಅನೇಕ ಅವಹೇಳನಕಾರಿ, ಮೂಲಭೂತವಾಧಿ ಮೂಡನಂಬಿಕೆ ಮತ್ತು ಅತಿಯಾದ ಸಂಪ್ರದಾಯದ ಆಚರಣೆಗಳು ಚಾಲ್ತಿಯಲ್ಲಿದೆ. ಭಾರತ ಸಂವಿಧಾನವು ಈಗಾಗಲೇ ಆರ್ಟಿಕಲ್ 44ರ ಅಡಿಯಲ್ಲಿ ನಾಗರಿಕರಿಗಾಗಿ ಯುಸಿಸಿ ಕಾನೂನಿಗೆ ಅವಕಾಶ ಕಲ್ಪಿಸಿದೆ.
ಆದರೆ ಅದು ಸದ್ಯ ಕೇವಲ ಕಾಗದಕ್ಕೆ ಮಾತ್ರ ಸಿಮೀತವಾಗಿದೆ. ಬದಲಾಗಿ ಅದು ರಾಷ್ಟ್ರದ ಸಮಗ್ರತೆಗಾಗಿ ವಾಸ್ತವ ರೂಪಕ್ಕೆ ಬರಬೇಕು’ ಎಂದರು. ‘ತ್ರಿವಳಿ ತಲಾಖ್ ಅಪಾಯಕಾರಿ ಎನ್ನುವುದು ಅರಿವಿಗೆ ಬರಲು ಹಲವು ವರ್ಷಗಳು ಬೇಕಾಯಿತು. ಅದೇ ರೀತಿ ಈಗ ನಾವು ಏಕರೂಪ ನಾಗರಿಕ ಸಂಹಿತೆ ಅಗತ್ಯ ಎನ್ನುವುದು ಅರ್ಥ ಮಾಡಿಕೊಳ್ಳಬೇಕು’ ಎಂದು ಅಭಿಪ್ರಾಯ ಪಟ್ಟರು.