ಸಾರಾಂಶ
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಎಕ್ಯುಐ (ವಾಯುಗುಣಮಟ್ಟ ಸೂಚ್ಯಂಕ) 350 ದಾಟಿ ಜನತೆ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ, ದೆಹಲಿಯ ತಮ್ಮ ಮನೆಯೊಳಗಿನ ಎಕ್ಯುಐ ಪ್ರಮಾಣವನ್ನು ಕೇವಲ 10-15ರೊಳಗೆ ಕಾಪಾಡುವ ಮೂಲಕ ದಂಪತಿ ಇಡೀ ಸಮಾಜಕ್ಕೆ ಮಾದರಿಯಾಗಿ ಹೊರಹೊಮ್ಮಿದ್ದಾರೆ.
ನಿಜ. ದಕ್ಷಿಣ ದೆಹಲಿಯ ಸೈನಿಕ ಫಾರ್ಮ್‌ನಲ್ಲಿ ಮನೆ ಹೊಂದಿರುವ ಪೀಟರ್ ಸಿಂಗ್ ಮತ್ತು ನಿನೋ ಕೌರ್ ದಂಪತಿ ಇಂಥದ್ದೊಂದು ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ. ಇವರ ಮನೆಯಲ್ಲಿನ ಪರಿಸರ ದೇಶದ ಯಾವುದೇ ಅತ್ಯುತ್ತಮ ವಾಯುಗುಣಮಟ್ಟಕ್ಕೆ ಸಮ ಎಂಬುದು ಅಚ್ಚರಿಯ ವಿಷಯ.
ಪರಿಸರ ಸ್ನೇಹಿ ಜೀವನ:
ದಂಪತಿಯ ಈ ಸಾಹಸದ ಹಿಂದೆ ಒಂದು ಕಥೆ ಇದೆ. ಕೆಲ ವರ್ಷಗಳ ಹಿಂದೆ ನಿನೋ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಅದಕ್ಕೆ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ದೆಹಲಿ ತೊರೆಯುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ದಂಪತಿ ಗೋವಾಕ್ಕೆ ಬಂದು ನೆಲೆಸಿದ್ದರು.
ನಂತರ ಆರ್ಯುವೇದ ವೈದ್ಯರ ಸಲಹೆ ಮತ್ತು ಪುತ್ರನ ಸಹಕಾರರೊಂದಿಗೆ ದೆಹಲಿಯಲ್ಲಿ ಪರಿಸರ ಸ್ನೇಹಿ ಮನೆ ಕಟ್ಟಿದ್ದರು. ಮನೆ ಗೋಡೆಗೆ ಪ್ಲಾಸ್ಟರ್ ಹಾಕದೇ, ಬಣ್ಣ ಬಳಿಯದೇ ಉಳಿಸಿಕೊಂಡಿದ್ದಾರೆ. ವಿದ್ಯುತ್ ಅಗತ್ಯಕ್ಕೆ ಪೂರ್ಣ ಸೌರಶಕ್ತಿ ಅವಲಂಬಿಸಿದ್ದಾರೆ. ನೀರಿಗೆ ಮಳೆ ಕೊಯ್ಲು ವ್ಯವಸ್ಥೆ ಮಾಡಿದ್ದಾರೆ. ಇದರ ಮೂಲಕ ವರ್ಷವಿಡೀ ತಮಗೆ ಬೇಕಾದ ತರಕಾರಿ ಮನೆಯಲ್ಲೇ ಬೆಳೆಯುತ್ತಾರೆ. ಇದರ ಜೊತೆಗೆ ಮನೆಯ ಒಳಗೆ ಮತ್ತು ಹೊರಗೆ ಅಂದಾಜು 150000 ಮರ, ಗಿಡ ಬೆಳೆಸಿದ್ದಾರೆ.
ಇವು ಮನೆಯ ಹೊರಗೆ ಮತ್ತು ಒಳಗಿನ ಗಾಳಿಯನ್ನು ನಿರಂತರ ಶುದ್ಧೀಕರಿಸುವ ಪರಿಣಾಮ ಮನೆಯ ಒಳಗಿನ ಎಕ್ಯುಐ ಪ್ರಮಾಣ ಸದಾ 10-15ರ ವ್ಯಾಪ್ತಿಯಲ್ಲೇ ದಾಖಲಾಗುತ್ತಿದೆ.