ಸಾರಾಂಶ
ನವದೆಹಲಿ: ಸಿಖ್ ಅಂಗರಕ್ಷಕರಿಂದ ಹತರಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಗೆ ಪ್ರತೀಕಾರವಾಗಿ 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಅವರಿಗೆ ದೆಹಲಿ ವಿಶೇಷ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಮೂಲಕ ಅವರು ಗಲ್ಲು ಶಿಕ್ಷೆಯಿಂದ ಬಚಾವಾಗಿದ್ದಾರೆ.ಇದು ಅವರಿಗೆ ಸಿಖ್ ವಿರೋಧಿ ಗಲಭೆಯಲ್ಲಿ ಆದ 2ನೇ ಜೀವಾವಧಿ ಶಿಕ್ಷೆಯಾಗಿದೆ. ಈ ಮುನ್ನ 2018ರ ಡಿ.17ರದು ದೆಹಲಿ ಹೈಕೋರ್ಟ್, ಇದೇ ರೀತಿಯ ಗಲಭೆಯಲ್ಲಿ 5 ಜನರ ಸಾವಿಗೆ ಕಾರಣರಾದ ಆರೋಪದಲ್ಲಿ ಸಜ್ಜನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.ಏನಿದು ಪ್ರಕರಣ?:1984ರ ನ.1ರಂದು ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣದೀಪ್ ಸಿಂಗ್ ಎಂಬುವರ ಹತ್ಯೆ ನಡೆದಿತ್ತು. ಈ ಆರೋಪದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ತೀರ್ಪು ಪ್ರಕಟಿಸಿದ್ದಾರೆ.ಗಲ್ಲಿನಿಂದ ಬಚಾವ್ ಏಕೆ?:ಈ ಕೊಲೆ ಅಪರಾಧಕ್ಕೆ ಗರಿಷ್ಠ ಮರಣದಂಡನೆ ವಿಧಿಸಲಾಗುತ್ತಿತ್ತು, ಕನಿಷ್ಠ ಶಿಕ್ಷೆ ಜೀವಾವಧಿ ಶಿಕ್ಷೆಯಾಗಿತ್ತು. ಕೊಲೆಯಾದ ಜಸ್ವಂತ್ ಅವರ ಪತ್ನಿ ಮತ್ತು ಪ್ರಾಸಿಕ್ಯೂಷನ್ ಪರ ವಕೀಲರು ಕುಮಾರ್‌ಗೆ ಮರಣದಂಡನೆ ವಿಧಿಸಬೇಕೆಂದು ಕೋರಿದ್ದರು.ಈ ಬಗ್ಗೆ ತಮ್ಮ ತೀರ್ಪಿನಲ್ಲಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ಕುಮಾರ್ ಮಾಡಿದ ಅಪರಾಧಗಳು ನಿಸ್ಸಂದೇಹವಾಗಿ ಕ್ರೂರ ಮತ್ತು ಖಂಡನೀಯವಾಗಿವೆ. ಆದರೆ ಅವರಿಗೆ ಈಗ 80 ವರ್ಷ ವಯಸ್ಸಾಗಿದೆ ಮತ್ತು ಅನಾರೋಗ್ಯ ಕಾಡುತ್ತಿದೆ. ಅಲ್ಲದೆ, ಬಂಧನದ ಬಳಿಕ ಅವರುಜೈಲಿನಲ್‌ಲಿ ಸನ್ನಡತೆ ತೋರಿದ್ದಾದ್ದು ತೃಪ್ತಿದಾಯಕ ನಡವಳಿಕೆ ತೋರಿದ್ದಾರೆ ಎಂದು ಜೈಲಧಿಕಾರಿಗಳು ವರದಿ ನೀಡಿದ್ದಾರೆ. ಹೀಗಾಗಿ ಈ ಅಂಶಗಳು ಅವರಿಗೆ ಗಲ್ಲಿನ ಬದಲು ಕಡಿಮೆ ಶಿಕ್ಷೆ ವಿಧಿಸುವಂತೆ ಮಾಡಿದೆ’ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಅವರಿಗೆ 2.4 ಲಕ್ಷ ರು. ದಂಡ ವಿಧಿಸಿದರು.ಈ ಹಿಂದಿನ ಜೀವಾವಧಿ ಹಾಗೂ ಈಗಿನ ಜೀವಾವಧಿ ಶಿಕ್ಷೆ ಸಮಾನ ಅವಧಿಯಲ್ಲಿ ಸಾಗಲಿವೆ ಎಂದು ಅವರು ಸ್ಪಷ್ಟಪಡಿಸಿದರು.