ಸಾರಾಂಶ
ಹೈದರಾಬಾದ್: ‘ನಟ ನಾಗಚೈತನ್ಯ ಮತ್ತು ನಟಿ ಸಮಂತಾ ದೂರವಾಗಲು ಬಿಎಸ್‌ಆರ್ ಮುಖಂಡ ಕೆ.ಟಿ. ರಾಮರಾವ್ ಕಾರಣ’ ಎಂದಿದ್ದ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ವಿರುದ್ಧ ನಟ ಅಕ್ಕಿನೇನಿ ನಾಗಾರ್ಜುನ ಮಾನಹಾನಿ ದಾವೆ ದಾಖಲಿಸಿದ್ದಾರೆ. ಇನ್ನು ಕೆ. ಟಿ ರಾಮರಾವ್ ಕೂಡ, ‘ನಿಮ್ಮ ಹೇಳಿಕೆ ಹಿಂತೆಗೆದುಕೊಳ್ಳಿ’ ಎಂದು ಸುರೇಖಾಗೆ ಲೀಗಲ್ ನೋಟಿಸ್ ಕಳಿಸಿದ್ದಾರೆ.
ಸಚಿವೆ ಸುರೇಖಾ ವಿರುದ್ಧ ನಾಗಚೈತನ್ಯ ಅವರ ತಂದೆ ನಾಗಾರ್ಜುನ ನಾಂಪಲ್ಲಿ ಕೋರ್ಟಿನಲ್ಲಿ ಮಾನಹಾನಿ ದಾವೆ ಹೂಡಿದ್ದು, ‘ಅಕ್ಕಿನೇನಿ ಕುಟುಂಬ ಹಾಗೂ ನನ್ನ ಮಗನ ಹೆಸರು ಕೆಡಿಸುವ ಏಕೈಕ ಉದ್ದೇಶದಿಂದ ಸುರೇಖಾ ಈ ಸುಳ್ಳು ಆರೋಪ ಮಾಡಿದ್ದಾರೆ’ ಎಂದು ದೂರಿದ್ದಾರೆ. ನಾಗಚೈತನ್ಯ ಅವರು ದೂರಿನ ಪ್ರತಿಯನ್ನು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಒಪ್ಪಿಗೆಯಿಂದ ದೂರ: ನಾಗ, ಸಮಂತಾ ಸ್ಪಷ್ಟನೆ
ಹೈದರಾಬಾದ್: ‘ನಾವಿಬ್ಬರು ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನ ಪಡೆದಿದ್ದೇವೆ’ ಎಂದು ಸಮಂತಾ ಮತ್ತು ನಾಗಚೈತನ್ಯ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಇನ್‌ಸ್ಟಾ ಖಾತೆಯಲ್ಲಿ ಬರೆದಿರುವ ಸಮಂತಾ ‘ನನ್ನ ವಿಚ್ಛೇದನ ವೈಯಕ್ತಿಕ ವಿಚಾರ. ಇದನ್ನು ಊಹಾಪೋಹಾದಿಂದ ದೂರವಿಡಿ. ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನವಾಗಿದೆ. ಇದರಲ್ಲಿ ರಾಜಕೀಯ ಪಿತೂರಿಯಿಲ್ಲ’ ಎಂದಿದ್ದಾರೆ.
ನಾಗಚೈತನ್ಯ ಕೂಡ ಪ್ರತಿಕ್ರಿಯಿಸಿದ್ದು, ‘ಬಹಳಷ್ಟು ಯೋಚನೆಗಳ ನಂತರ ನಾನು ಮತ್ತು ನನ್ನ ಮಾಜಿ ಸಂಗಾತಿ ಒಪ್ಪಂದದ ಮೇರೆಗೆ ವಿಚ್ಛೇದನ ಪಡೆದಿದ್ದೇವೆ’ ಎಂದಿದ್ದಾರೆ.