ಸಾರಾಂಶ
ಸಂಭಲ್ : ಉತ್ತರ ಪ್ರದೇಶದ ಸಂಭಲ್‌ನಲ್ಲಿ ಹಿಂಸಾಚಾರ ಎಸಗಿದ ಪ್ರತಿಭಟನಾಕಾರರಿಂದಲೇ ಸಾರ್ವಜನಿಕ ಆಸ್ತಿ ಹಾನಿಗೆ ಪರಿಹಾರವನ್ನು ಉತ್ತರ ಪ್ರದೇಶ ಸರ್ಕಾರ ವಸೂಲಿ ಮಾಡಲಿದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಲ್ಲು ತೂರಾಟಗಾರರ ಪೋಸ್ಟರ್ ಪ್ರದರ್ಶಿಸಲಿದೆ.
ಮಸೀದಿ ಸಮೀಕ್ಷೆ ವಿರೋಧಿಸಿ ಸಾವಿರಾರು ಜನರು ಸಮೀಕ್ಷೆಗಾರರ ಮೇಲೆ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪೊಲೀಸ್ ವಾಹನ ಸೇರಿ 6 ವಾಹನಗಳಿಗೆ ಬೆಂಕಿ ಹಚ್ಚಿದ್ದರು. ತಮ್ಮ ಗಲಾಟೆ ರೆಕಾರ್ಡ್ ಆಗಬಾರದು ಎಂದು ಸಿಸಿ ಕ್ಯಾಮರಾ ಒಡೆದಿದ್ದರು. ಮಸೀದಿ ಸುತ್ತ ಮುತ್ತ ಅಪಾರ ಆಸ್ತಿಪಾಸ್ತಿ ಹಾನಿ ಮಾಡಿದ್ದರು.
ಈ ಬಗ್ಗೆ ಬುಧವಾರ ಮಾತನಾಡಿದ ಅಧಿಕಾರಿಯೊಬ್ಬರು, ‘ದಂಗೆಕೋರರ ವಿರುದ್ಧ ಯೋಗಿ ಸರ್ಕಾರವು ದೃಢ ನಿಲುವು ತೆಗೆದುಕೊಳ್ಳುತ್ತಿದೆ. ಕಲ್ಲು ತೂರಾಟಗಾರರು ಮತ್ತು ದುಷ್ಕರ್ಮಿಗಳ ಪೋಸ್ಟರ್‌ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗವುದು ಮತ್ತು ಅವರ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದರೆ ಬಹುಮಾನ ನೀಡಲಾಗುವುದು. ಬಂಧಿತರಿಂದ ಹಾನಿಯ ಪರಿಹಾರ ಮೊತ್ತ ವಸೂಲಿ ಮಾಡಲಾಗುವುದು’ ಎಂದರು.
ಇದೇ ರೀತಿಯ ಉಪಕ್ರಮದಲ್ಲಿ, ಸರ್ಕಾರವು ಈ ಹಿಂದೆ 2020 ರಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ವಿಧ್ವಂಸಕ ಕೃತ್ಯ ಎಸಗಿದವರ ಪೋಸ್ಟರ್ ಹಾಕಿತ್ತು. ಆದರೆ ನಂತರ ಕೋರ್ಟ್ ಆದೇಶದ ನಂತರ ತೆಗೆದುಹಾಕಿತ್ತು.
ಇಲ್ಲಿಯವರೆಗೆ, ಪೊಲೀಸರು 25 ವ್ಯಕ್ತಿಗಳನ್ನು ಬಂಧಿಸಿದ್ದಾರೆ. 2,750ಕ್ಕೂ ಹೆಚ್ಚು ಅಪರಿಚಿತ ಶಂಕಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.