ಸಾರಾಂಶ
ಜಗನ್ನಾಥ ಮೋದಿಯ ಭಕ್ತ ಎಂದಿದ್ದಕ್ಕೆ ಬಿಜೆಪಿ ನಾಯಕ ಸಂಬಿತ್ ಪಾತ್ರ 3 ದಿನದ ಉಪವಾಸ ಕೈಗೊಂಡಿದ್ದು, ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದು, ಉಪವಾಸದ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಭುವನೇಶ್ವರ: ಪುರಿಯ ಸ್ವಾಮಿ ಜಗನ್ನಾಥನೇ ಪ್ರಧಾನಿ ಮೋದಿಯ ಭಕ್ತ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಬಿಜೆಪಿ ನಾಯಕ ಸಂಬಿತ್ ಪಾತ್ರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ ಹಾಗೂ ಮಂಗಳವಾರದಿಂದ ತಮ್ಮ ಪಾಪ ಕಳೆದುಕೊಳ್ಳುವ ಸಲುವಾಗಿ ಮೂರು ದಿನಗಳ ಉಪವಾಸ ಮಾಡುವುದಾಗಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ, ‘ನನ್ನ ಹೇಳಿಕೆಗೆ ಮಹಾಪ್ರಭು ಜಗನ್ನಾಥನ ಚರಣಕಮಲಕ್ಕೆ ಬಿದ್ದು ಕ್ಷಮೆಯಾಚಿಸುತ್ತೇನೆ. ನಾನು ಬಾಯ್ತಪ್ಪಿ ಹೇಳಿದ ಅಚಾತುರ್ಯಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಲುವಾಗಿ ಮಂಗಳವಾರದಿಂದ ಮೂರು ದಿನಗಳ ಉಪವಾಸ ಮಾಡುವ ಸ್ವಯಂ ಶಿಕ್ಷೆ ವಿಧಿಸಿಕೊಂಡಿದ್ದೇನೆ’ ಎಂದು ಪ್ರಕಟಿಸಿದ್ದಾರೆ.ಸೋಮವಾರ ಮೋದಿ ಒಡಿಶಾಗೆ ಬಂದ ವೇಳೆ ಮಾತನಾಡಿದ್ದ ಪಾತ್ರ, ‘ಮೋದಿ ಜಗನ್ನಾಥನ ಭಕ್ತ’ ಎನ್ನುವ ಬದಲು ‘ಮೋದಿಯ ಭಕ್ತ ಜಗನ್ನಾಥ’ ಎಂದಿದ್ದರು. ಇದು ದೇವರಿಗೆ ಮಾಡಿದ ಅವಮಾನ ಎಂದು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಹಾಗೂ ಕಾಂಗ್ರೆಸ್ ನಾಯಕರು ಖಂಡಿಸಿದ್ದರು. ಇದರ ಬೆನ್ನಲ್ಲೇ ಬಾಯಿತಪ್ಪಿ ಆಡಿದ ಮಾತು ಅದು ಎಂದು ಪಾತ್ರ ಸ್ಪಷ್ಟಪಡಿಸಿದ್ದರು.