ಸಂದೇಶ್‌ಖಾಲಿ ಡಾನ್‌ ಶಾಜಹಾನ್‌ ಬಲೆಗೆ

| Published : Mar 01 2024, 02:16 AM IST / Updated: Mar 01 2024, 08:17 AM IST

ಸಾರಾಂಶ

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ದ್ವೀಪ ಪ್ರದೇಶದ ಕುಖ್ಯಾತ ಡಾನ್‌, ಟಿಎಂಸಿ ಮುಖಂಡ ಶಾಜಹಾನ್‌ನನ್ನು ಗುರುವಾರ ಬೆಳಗಿನ ಜಾವ ಬಂಧಿಸಲಾಗಿದೆ.

ಬಸಿರ್‌ಹಾತ್‌: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ದ್ವೀಪ ಪ್ರದೇಶದ ಕುಖ್ಯಾತ ಡಾನ್‌, ಟಿಎಂಸಿ ಮುಖಂಡ ಶಾಜಹಾನ್‌ನನ್ನು ಗುರುವಾರ ಬೆಳಗಿನ ಜಾವ ಬಂಧಿಸಲಾಗಿದೆ. 

ಕಳೆದ 55 ದಿನಗಳಿಂದ ನಾಪತ್ತೆಯಾಗಿದ್ದ ಕುಖ್ಯಾತ ಭೂವಂಚಕ, ಮಹಿಳಾ ಪೀಡಕನ ಬಂಧನದೊಂದಿಗೆ ಈತನ ಬಂಧನಕ್ಕಾಗಿ ಕಳೆದ 2 ತಿಂಗಳಿಂದ ಬೃಹತ್‌ ಹೋರಾಟ ನಡೆಸಿದ್ದ ದಮನಿತ ಸಮುದಾಯ ಮತ್ತು ಹಿಂದೂ ಮಹಿಳೆಯರಿಗೆ ದೊಡ್ಡ ಜಯ ಸಿಕ್ಕಂತಾಗಿದೆ. ಅವರೆಲ್ಲರೂ ಸಂಭ್ರಮಾಚರಣೆ ಮಾಡಿದ್ದಾರೆ.

ಸಂದೇಶ್‌ಖಾಲಿಯಿಂದ ಕೇವಲ 30 ಕಿ.ಮೀ ದೂರದ ಬಮನ್‌ಪುಕರ್‌ ಪ್ರದೇಶದ ಮನೆಯೊಂದರಲ್ಲಿ ಶಾಜಹಾನ್‌, ತನ್ನ ಸಂಗಡಿಗರೊಂದಿಗೆ ಸಿಕ್ಕಿಬಿದ್ದಿದ್ದಾನೆ.ಬಂಧನದ ಬೆನ್ನಲ್ಲೇ ಆತನನ್ನು ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದ್ದು, ಅದು ಶಾಜಹಾನ್‌ ಶೇಖ್‌ನನ್ನು 10 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದೆ.

 ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರವಾಗಿದೆ. ಈ ನಡುವೆ ಈತನ ಪ್ರಕರಣದಲ್ಲಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಈತನನ್ನು ಸರ್ಕಾರದಲ್ಲಿ ಅನುಭವಿಸುತ್ತಿದ್ದ ನಿಗಮ-ಮಂಡಳಿಗಳ ಹುದ್ದೆಯಿಂದ ವಜಾ ಮಾಡಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ.

ಸದ್ಯಕ್ಕೆ ಈತನನ್ನು ಬಂಧಿಸಿರುವುದು ಕಳೆದ ಜ.5ರಂದು ಪಡಿತರ ಹಗರಣದ ತನಿಖೆಗೆ ಬಂದಿದ್ದ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳ ಮೇಲಿನ ದಾಳಿ ಪ್ರಕರಣದಲ್ಲಿ. ಈತನ ವಿರುದ್ಧ ಮಾಡಲಾದ ಅಕ್ರಮ ಭೂಕಬಳಿಕೆ, ಹಿಂದೂ ಮಹಿಳೆಯರ ಮೇಲೆ ಭೀಕರ ಗ್ಯಾಂಗ್‌ರೇಪ್‌ ಪ್ರಕರಣದಲ್ಲಿ ಇನ್ನೂ ಆತನನ್ನು ಬಂಧಿಸಿಲ್ಲ.

ಏನಾಗಿತ್ತು?:
ಪಡಿತರ ಹಗರಣ ಸಂಬಂಧ ಶಾಜಹಾನ್‌ ವಿಚಾರಣೆಗೆ ತೆರಳಿದ್ದ ಇ.ಡಿ. ಅಧಿಕಾರಿಗಳ ಮೇಲೆ ಆತನ ಬೆಂಬಲಿಗರು ದಾಳಿ ನಡೆಸಿದ್ದರು. ಅದಾದ ಬಳಿಕ ಆತ ನಾಪತ್ತೆಯಾಗಿದ್ದ. ಈತನಿಗೆ ಪೊಲೀಸರೇ ರಕ್ಷಣೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಅದರ ಬೆನ್ನಲ್ಲೇ ಸಂದೇಶ್‌ಖಾಲಿ ಪ್ರದೇಶದಲ್ಲಿ ಶಾಜಹಾನ್ ಮತ್ತು ಆತನ ಬೆಂಬಲಿಗರು, ಅನೇಕ ವರ್ಷಗಳಿಂದ ಜನರಿಂದ ಅಕ್ರಮವಾಗಿ ಭೂಮಿ ವಶಪಡಿಸಿಕೊಂಡ ಪ್ರಕರಣ ಮತ್ತು ಆತನ ಬೆಂಬಲಿಗರು ಸುಂದರ ಹಿಂದೂ ಮಹಿಳೆಯರ ಅಪಹರಿಸಿ ಟಿಎಂಸಿ ಕಚೇರಿಯಲ್ಲೇ ಸರಣಿ ಅತ್ಯಾಚಾರಗೈದ ಪ್ರಕರಣ ಮುನ್ನೆಲೆಗೆ ಬಂದು ಆತನ ಬಂಧನಕ್ಕೆ ಆಗ್ರಹಿಸಿ ಸಂತ್ರಸ್ತರು ಬೀದಿಗಿಳಿದು ಹೋರಾಟ ಆರಂಭಿಸಿದ್ದರು. ಹೋರಾಟ ಹಿಂಸಾರೂಪ ಪಡೆದಿತ್ತು.

ವಿಷಯ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ, ಮಕ್ಕಳ ಆಯೋಗ, ಹಿಂದುಳಿದ ವರ್ಗಗಳ ಆಯೋಗ, ಮಾನವ ಹಕ್ಕು ಆಯೋಗ ಸ್ಥಳಕ್ಕೆ ಭೇಟಿ ನೀಡಿ ಬಂಗಾಳ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದವು.

 ಸ್ವತಃ ಹೈಕೋರ್ಟ್‌ ಕೂಡಾ ಈತನ ಬಂಧನ ಮಾಡದ ಪೊಲೀಸರ ವಿರುದ್ಧ ಕಿಡಿಕಾರಿತ್ತು ಹಾಗೂ 2 ದಿನದ ಹಿಂದೆ ಬಂಧನಕ್ಕೆ 7 ದಿನದ ಗಡುವು ನೀಡಿತ್ತು.

ಇ.ಡಿ. ಮೇಲೆ ದಾಳಿ ಮಾಡಿಸಿದ್ದು ನಾನೇ: ಶಾಜಹಾನ್‌ ತಪ್ಪೊಪ್ಪಿಗೆ: ಸಂದೇಶ್‌ಖಾಲಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಬಂದಾಗ ಅವರ ಮೇಲೆ ತನ್ನ ಬೆಂಬಲಿಗರಿಂದ ದಾಳಿ ಮಾಡಿಸಿದ್ದು ತಾನೇ ಎಂದು ಟಿಎಂಸಿ ಉಚ್ಚಾಟಿತ ನಾಯಕ ಶೇಖ್‌ ಶಾಜಹಾನ್ ಪೊಲೀಸ್‌ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಕೋರ್ಟ್‌ಗೆ ತಿಳಿಸಿದ್ದಾರೆ. 

ಜನವರಿಯಲ್ಲಿ ಇ.ಡಿ. ಅಧಿಕಾರಿಗಳು ಆತನ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಬಂದಾಗ ಅವರ ಮೇಲೆ ಆತನ ಬೆಂಬಲಿಗರು ದಾಳಿ ಮಾಡಿದ್ದರು.