610 ಕೆಜಿ ತೂಕದ ಮೂಲಕ ಕೂರಲು, ಏಳಲೂ ಆಗದೆ ಮೂರು ವರ್ಷ ಹಾಸಿಗೆ ಹಿಡಿದಿದ್ದ ಶಾರಿ ಈಗ 68 ಕೆಜಿಗೆ ಇಳಿಕೆ!

| Published : Aug 15 2024, 01:46 AM IST / Updated: Aug 15 2024, 06:18 AM IST

ಸಾರಾಂಶ

610 ಕೆಜಿ ತೂಕದ ಮೂಲಕ ಕೂರಲು, ಏಳಲೂ ಆಗದೆ ಮೂರು ವರ್ಷ ಹಾಸಿಗೆ ಹಿಡಿದಿದ್ದ ಸೌದಿ ಅರೇಬಿಯಾದ ಖಾಲಿದ್‌ ಬಿನ್‌ ಮೊಹ್ಸೀನ್‌ ಶಾರೀ (33) ಇದೀಗ ಅಚ್ಚರಿ ರೀತಿಯಲ್ಲಿ ತಮ್ಮ ದೇಹದ ತೂಕವನ್ನು ಕೇವಲ 68 ಕೆಜಿಗೆ ಇಳಿಸಿಕೊಂಡಿದ್ದಾರೆ. ಅಂದರೆ ಅವರ ತೂಕ 542 ಕೇಜಿಯಷ್ಟುಇಳಿದಿದೆ.

ನವದೆಹಲಿ: 610 ಕೆಜಿ ತೂಕದ ಮೂಲಕ ಕೂರಲು, ಏಳಲೂ ಆಗದೆ ಮೂರು ವರ್ಷ ಹಾಸಿಗೆ ಹಿಡಿದಿದ್ದ ಸೌದಿ ಅರೇಬಿಯಾದ ಖಾಲಿದ್‌ ಬಿನ್‌ ಮೊಹ್ಸೀನ್‌ ಶಾರೀ (33) ಇದೀಗ ಅಚ್ಚರಿ ರೀತಿಯಲ್ಲಿ ತಮ್ಮ ದೇಹದ ತೂಕವನ್ನು ಕೇವಲ 68 ಕೆಜಿಗೆ ಇಳಿಸಿಕೊಂಡಿದ್ದಾರೆ. ಅಂದರೆ ಅವರ ತೂಕ 542 ಕೇಜಿಯಷ್ಟುಇಳಿದಿದೆ.

ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದ 14 ವರ್ಷದ ಶಾರಿಯ ದೇಹದ ತೂಕ 2013ರಲ್ಲಿ 610 ಕೆಜಿಗೆ ತಲುಪಿತ್ತು. ಹೀಗಾಗಿ ಜೀವಂತವಿರುವ ವಿಶ್ವದ ಅತಿ ತೂಕದ ಮನುಷ್ಯ ಎಂಬ ದಾಖಲೆ ಆತನಿಗೆ ಒಲಿದಿತ್ತು. ಆದರೆ ಈ ದೇಹದ ತೂಕದ ಪರಿಣಾಮ ಶಾರಿ ಓಡಾಡಲಾಗದ ಸ್ಥಿತಿ ತಲುಪಿದ್ದ. ಸಣ್ಣ ಪುಟ್ಟ ಕೆಲಸಕ್ಕೂ ಕುಟುಂಬದ ಸದಸ್ಯರ ನೆರವು ಅನಿವಾರ್ಯವಾಗಿತ್ತು. ಈ ಬಾಲಕನ ಮನಮಿಡಿಯುವ ಕಥೆ ಎಲ್ಲೆಡೆ ವೈರಲ್‌ ಆಗಿತ್ತು.

ಈ ಹಿನ್ನೆಲೆಯಲ್ಲಿ ಸೌದಿಯ ಮಾಜಿ ರಾಜ ಅಬ್ದುಲ್ಲಾಹ್‌ ಶಾರಿಗೆ ನೆರವಿಗೆ ಮುಂದಾಗಿದ್ದರು. ಆತನನ್ನು ರಿಯಾದ್‌ನ ಕಿಂಗ್‌ ಫಹಾದ್‌ ಆಸ್ಪತ್ರೆಗೆ ದಾಖಲಿಸಿ ಸಮಗ್ರ ಚಿಕಿತ್ಸೆಗೆ ಸೂಚಿಸಿದ್ದರು. ಆತನನ್ನು ಮನೆಯಿಂದ ಆಸ್ಪತ್ರೆಗೆ ಕರೆತರಲು ವಿಶೇಷ ಉಪಕರಣವನ್ನು ಬಳಸಲಾಗಿತ್ತು. ಬಳಿಕ ಶಾರಿಗೆ 30 ವೈದ್ಯರ ತಂಡ ವಿಶೇಷ ಚಿಕಿತ್ಸೆ ಆರಂಭಿಸಿತ್ತು. ಅದರಲ್ಲಿ ಗ್ಯಾಸ್ಟ್ರಿಕ್‌ ಬೈಪಾಸ್‌ ಶಸ್ತ್ರಚಿಕಿತ್ಸೆ, ವಿಶೇಷ ಪಥ್ಯ, ವ್ಯಾಯಾಮ ಇತ್ಯಾದಿ ಸೇರಿತ್ತು.

ಈ ಚಿಕಿತ್ಸಾ ಕ್ರಮಗಳು ಫಲ ಕೊಡಲು ಆರಂಭಿಸಿ ಶಾರಿಯ ತೂಕ 542 ಕೆಜಿಯಷ್ಟು ಕಡಿಮೆಯಾಗಿ ಕೇವಲ 68 ಕೆಜಿಗೆ ತಲುಪಿದೆ. ತನ್ನ ಹಿಂದಿನ ಆರೋಗ್ಯ ಮತ್ತು ದೇಹ ಪಡೆದುಕೊಂಡ ಶಾರೀ ಇದೀಗ ಹಸನ್ಮುಖಿಯಾಗಿ ಮನೆಗೆ ಮರಳಿದ್ದಾನೆ. ಹೀಗಾಗಿಯೇ ಆತನಿಗೆ ಚಿಕಿತ್ಸೆ ನೀಡಿದ್ದ ವೈದ್ಯರ ತಂಡ ಆತನಿಗೆ ಸ್ಮೈಲಿಂಗ್‌ ಮ್ಯಾನ್‌ ಎಂಬ ನಿಕ್‌ನೇಮ್‌ ನೀಡಿ ಕಳುಹಿಸಿಕೊಟ್ಟಿದೆ.