ವೈದ್ಯರಿಂದ ರೋಗಿಗಳಿಗೆ ಔಷಧಗಳ ಅಡ್ಡ ಪರಿಣಾಮ ಉಲ್ಲೇಖ ಕಡ್ಡಾಯಕ್ಕೆ ಸುಪ್ರೀಂಕೋರ್ಟ್‌ ನಕಾರ

| Published : Nov 15 2024, 12:32 AM IST / Updated: Nov 15 2024, 05:01 AM IST

ಸಾರಾಂಶ

ವೈದ್ಯರು ರೋಗಿಗಳಿಗೆ ಔಷಧಗಳನ್ನು ಶಿಫಾರಸು ಮಾಡಿದಾಗ, ಅದರ ಅಡ್ಡಪರಿಣಾಮಗಳ ಕುರಿತೂ ಉಲ್ಲೇಖ ಮಾಡಲು ಸೂಚಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದೆ.

ನವದೆಹಲಿ: ವೈದ್ಯರು ರೋಗಿಗಳಿಗೆ ಔಷಧಗಳನ್ನು ಶಿಫಾರಸು ಮಾಡಿದಾಗ, ಅದರ ಅಡ್ಡಪರಿಣಾಮಗಳ ಕುರಿತೂ ಉಲ್ಲೇಖ ಮಾಡಲು ಸೂಚಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದೆ.

ಮೇ.15ರಂದು ಈ ಮನವಿಯನ್ನು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ। ಬಿ.ಆರ್‌. ಗವಾಯ್‌ ಹಾಗೂ ಕೆ.ವಿ. ವಿಶ್ವನಾಥನ್‌ ಅವರ ಪೀಠ, ‘ಇದು ವಾಸ್ತವದಲ್ಲಿ ಸಾಧ್ಯವಿಲ್ಲ. ಹೀಗಾದರೆ ವೈದ್ಯರು 10 ರಿಂದ 15 ರೋಗಿಗಳನ್ನಷ್ಟೇ ಪರೀಕ್ಷಿಸಬಹುದು. ಪರಿಣಾಮವಾಗಿ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಪ್ರಕರಣಗಳು ದಾಖಲಾಗಬಹುದು’ ಎಂದು ಹೇಳಿದೆ.

ಅರ್ಜಿದಾರ ಜೆಕೋಬ್‌ ವಡಕ್ಕಾಂಚೆರಿ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್‌ ಭೂಷಣ್‌, ‘ಅಡ್ಡಪರಿಣಾಮ ಉಲ್ಲೇಖದಿಂದ ವೈದ್ಯಕೀಯ ನಿರ್ಲಕ್ಷ್ಯದ ಸಂಬಂಧ ಪ್ರಕರಣಗಳು ದಾಖಲಾಗುವುದನ್ನು ತಪ್ಪಿಸಬಹುದು. ವೈದ್ಯರು ಔಷಧಿಗಳಿಂದ ಉಂಟಾಗಬಹುದಾದ ಸಂಭಾವ್ಯ ತೊಂದರೆಗಳ ಪಟ್ಟಿಯನ್ನು ಮುಂಚಿತವಾಗಿ ತಯಾರಿಸಿಟ್ಟುಕೊಳ್ಳಬಹುದು’ ಎಂದರು.

ಪ್ರಕರಣವೇನು?:

ದೇಶದ ಎಲ್ಲಾ ವೈದ್ಯರು ರೋಗಿಗಳಿಗೆ ಸೂಚಿಸುವ ಔಷಧಿಗಳೊಂದಿಗೆ ಅವುಗಳಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳ ಪಟ್ಟಿಯನ್ನು ಸ್ಥಳೀಯ ಭಾಷೆಯಲ್ಲಿ ಒದಗಿಸುವುದನ್ನು ಕಡ್ಡಾಯಗೊಳಿಸುವಂತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಸೂಚಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಕೆಯಾಗಿತ್ತು. ಇದರಿಂದಾಗಿ ಆ ಔಷಧವನ್ನು ಸೇವಿಸುವ ಬಗ್ಗೆ ರೋಗಿ ನಿರ್ಧರಿಸಬಹುದು ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು.