ಸಾರಾಂಶ
ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ವ್ಯಕ್ತಿಗಳ ಆಸ್ತಿಪಾಸ್ತಿಗಳನ್ನು ತನ್ನ ಅನುಮತಿ ಇಲ್ಲದೇ ಧ್ವಂಸಗೊಳಿಸಕೂಡದು ಎಂದು ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿದ್ದು, ಅ.1ರವರೆಗೆ ‘ಬುಲ್ಡೋಜರ್ ನ್ಯಾಯ’ಕ್ಕೆ ಬ್ರೇಕ್ ಹಾಕಿದೆ.
ಪಿಟಿಐ ನವದೆಹಲಿ
ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ವ್ಯಕ್ತಿಗಳ ಆಸ್ತಿಪಾಸ್ತಿಗಳನ್ನು ತನ್ನ ಅನುಮತಿ ಇಲ್ಲದೇ ಧ್ವಂಸಗೊಳಿಸಕೂಡದು ಎಂದು ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿದ್ದು, ಅ.1ರವರೆಗೆ ‘ಬುಲ್ಡೋಜರ್ ನ್ಯಾಯ’ಕ್ಕೆ ಬ್ರೇಕ್ ಹಾಕಿದೆ.ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ವ್ಯಕ್ತಿಗಳ ಮನೆ/ಆಸ್ತಿಪಾಸ್ತಿಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸುತ್ತಿರುವ ವಿವಿಧ ಸರ್ಕಾರಗಳ ನಡೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಮುಂದುವರಿಸಿದ ನ್ಯಾ। ಬಿ.ಆರ್. ಗವಾಯಿ ಮತ್ತು ನ್ಯಾ। ಕೆ.ವಿ. ವಿಶ್ವನಾಥನ್ ಅವರ ಪೀಠ, ‘ಒಂದೇ ಒಂದು ಅಕ್ರಮ ಧ್ವಂಸ ಪ್ರಕರಣ ಆಗಿದ್ದರೂ ಸಹ ಅದು ನಮ್ಮ ಸಂವಿಧಾನದ ನೀತಿಗೆ ವಿರುದ್ಧವಾಗಿದೆ. ಹೀಗಾಗಿ ನಾವು ಮುಂದಿನ ವಿಚಾರಣೆ ನಡೆಸುವವರೆಗೂ ಆರೋಪಿಗಳ ಯಾವುದೇ ಕಟ್ಟಡವನ್ನು ನಮ್ಮ ಅನುಮತಿ ಇಲ್ಲದೇ ಧ್ವಂಸ ಮಾಡಕೂಡದು’ ಎಂದು ಚಾಟಿ ಬೀಸಿತು ಹಾಗೂ ವಿಚಾರಣೆಯನ್ನು ಅ.1ಕ್ಕೆ ಮುಂದೂಡಿತು.ಇದೇ ವೇಳೆ, ಸುಪ್ರೀಂ ಕೋರ್ಟ್ ಸೂಚನೆಗೆ ಆಕ್ಷೇಪ ಎತ್ತಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ನಿಮ್ಮ ಆದೇಶದಿಂದ ಅಕ್ರಮ ಕಟ್ಟಡಗಳ ತೆರವಿಗೆ ಅಡ್ಡಿ ಆಗುತ್ತದೆ’ ಎಂದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪೀಠ, ‘ಮುಂದಿನ ವಿಚಾರಣೆಯವರೆಗೂ ಕಾಯ್ದರೆ ಸ್ವರ್ಗವೇನೂ ಬಿದ್ದುಹೋಗಲ್ಲ’ ಎಂದು ನುಡಿಯಿತು.ಅದರೆ ತನ್ನ ಆದೇಶವು ಸಾರ್ವಜನಿಕ ರಸ್ತೆಗಳು, ಫುಟ್‌ಪಾತ್‌ಗಳು ಇತ್ಯಾದಿಗಳಲ್ಲಿನ ಅನಧಿಕೃತ ರಚನೆಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.ಇದೇ ವೇಳೆ ‘ಬುಲ್ಡೋಜರ್ ಬಳಸಿ ಕಟ್ಟಡ ಧ್ವಂಸ ಮಾಡುವುದನ್ನು ವೈಭವೀಕರಿಸಲಾಗುತ್ತಿದೆ ಹಾಗೂ ಅದ್ಭುತ ಎಂದು ಹೇಳಲಾಗುತ್ತಿದೆ. ಇದು ಸಲ್ಲದು’ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿತು.ಈ ತಿಂಗಳಿನಲ್ಲಿ ಈಗಾಗಲೇ ಎರಡು ಬಾರಿ ‘ಬುಲ್ಡೋಜರ್ ನ್ಯಾಯ’ ಕುರಿತು ಕೋರ್ಟ್ ಕಠಿಣ ನುಡಿ ಆಡಿತ್ತು.ಬಿಜೆಪಿ ಆಡಳಿತದ ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ವಿವಿಧ ಪ್ರಕರಣಗಳ ಆರೋಪಿಗಳ ಮನೆಗಳು ಅಕ್ರಮ ಎಂದು ಕಂಡುಬಂದರೆ ಅವುಗಳನ್ನು ಧ್ವಂಸಗೊಳಿಸುವ ಪರಿಪಾಠ ಕಳೆದ 1-2 ವರ್ಷದಲ್ಲಿ ತೀವ್ರಗೊಂಡಿತ್ತು. ಇದನ್ನು ಪ್ರಶ್ನಿಸಿ ಹಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.