ಸಾರಾಂಶ
ನವದೆಹಲಿ: ಮಹಾರಾಷ್ಟ್ರ ಚುನಾವಣೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸುಳ್ಳು ಮಾಹಿತಿ ಹಂಚಿಕೊಂಡಿದ್ದ ಚುನಾವಣಾ ತಜ್ಞ ಸಂಜಯ್ ಕುಮಾರ್ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ರಕ್ಷಣೆ ನೀಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಸಂಜಯ್ ಅವರ ಮೇಲೆ ಚುನಾವಣಾ ಆಯೋಗ ಎಫ್‌ಐಆರ್ ದಾಖಲಿಸಿತ್ತು. ಇದನ್ನು ಪ್ರಶ್ನಿಸಿ ಅವರು ಕೋರ್ಟ್ ಮೊರೆ ಹೋಗಿದ್ದರು ಹಾಗೂ ಆಗಿದ್ದಕ್ಕೆ ಕ್ಷಮೆ ಕೇಳಿದ್ದೇನೆ ಎಂದಿದ್ದರು.
ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಬಿ.ಆರ್. ಗವಾಯಿ ಮತ್ತು ನ್ಯಾ। ಎನ್.ವಿ. ಅಂಜಾರಿಯಾ ಅವರ ಪೀಠ, ಸಂಜಯ್ ಅವರ ಸಾರ್ವಜನಿಕ ಕ್ಷಮೆಯಾಚನೆಯನ್ನು ಪರಿಗಣಿಸಿದೆ. ಜತೆಗೆ, ‘ಅವರಿಗೆ ನೋಟಿಸ್ ನೀಡಬಹುದು. ಆದರೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು’ ಎಂದು ಆದೇಶಿಸಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಸಿಎಸ್‌ಡಿಎಸ್‌ನ ಸಹ-ನಿರ್ದೇಶಕರಾದ ಸಂಜಯ್ ಅವರು ಎಕ್ಸ್‌ನಲ್ಲಿ ದತ್ತಾಂಶವನ್ನು ಹಂಚಿಕೊಂಡಿದ್ದರು. ಬಳಿಕ ಸಿಬ್ಬಂದಿಯ ತಪ್ಪಿನಿಂದಾಗಿ ತಪ್ಪು ಡೇಟಾ ಪ್ರಕಟಿಸಲಾಗಿತ್ತು ಎಂದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದರು. ಇದರ ಹೊರತಾಗಿಯೂ ದಾಖಲಾದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸಿಎಸ್‌ಡಿಎಸ್ ಬಿಡುಗಡೆಮಾಡಿದ್ದ ಡೇಟಾ ಆಧರಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮಹಾರಾಷ್ಟ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದರು.