ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ನೋಟಿಸ್‌ : ಸದ್ಗುರು ಈಶ ಫೌಂಡೇಶನ್‌ಗೆ ಸುಪ್ರೀಂ ರಿಲೀಫ್‌

| N/A | Published : Mar 01 2025, 01:04 AM IST / Updated: Mar 01 2025, 07:05 AM IST

ಸಾರಾಂಶ

 ಸದ್ಗುರು ಅವರ ಈಶ ಫೌಂಡೇಶನ್‌ ವಿರುದ್ಧ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ನೋಟಿಸ್‌ ಅನ್ನು ರದ್ದುಪಡಿಸಿದ್ದ ಮದ್ರಾಸ್‌ ಹೈಕೋರ್ಟ್‌ ತೀರ್ಪಿನ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.  

 ನವದೆಹಲಿ : ಕೊಯಮತ್ತೂರು ಬಳಿ ಇರುವ ಆಧ್ಯಾತ್ಮಿಕ ಪ್ರವರ್ತಕ ಸದ್ಗುರು ಅವರ ಈಶ ಫೌಂಡೇಶನ್‌ ವಿರುದ್ಧ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ನೋಟಿಸ್‌ ಅನ್ನು ರದ್ದುಪಡಿಸಿದ್ದ ಮದ್ರಾಸ್‌ ಹೈಕೋರ್ಟ್‌ ತೀರ್ಪಿನ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಅಲ್ಲದೆ, ಅಲ್ಲಿರುವ ಯೋಗ ಹಾಗೂ ಧ್ಯಾನ ಕೇಂದ್ರ ಕಟ್ಟಡಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.

ಕೊಯಮತ್ತೂರಿನ ವೆಲ್ಲಿಯಂಗಿರಿ ಬೆಟ್ಟದ ತಪ್ಪಲಿನಲ್ಲಿ, ಪರಿಸರಕ್ಕೆ ಸಂಬಂಧಿಸಿದ ಪೂರ್ವ ಅನುಮತಿ ಇಲ್ಲದೆ, ಈಶ ಕಟ್ಟಡಗಳನ್ನು ನಿರ್ಮಿಸಿದ್ದರ ವಿರುದ್ಧ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ನೀಡಿತ್ತು. ಅದನ್ನು ಹೈಕೋರ್ಟ್‌ 2022ರ ಡಿ.14ರಂದು ರದ್ದುಗೊಳಿಸಿತ್ತು. ಬಳಿಕ ಮಂಡಳಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

ಆದರೆ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಒಪ್ಪದ ನ್ಯಾ। ಸೂರ್ಯಕಾಂತ್‌ ಮತ್ತು ಎನ್‌. ಕೋಟೀಶ್ವರ್‌ ಅವರ ಪೀಠ, ‘ಸಂಸ್ಥೆಯ ಯೋಗ ಮತ್ತು ಧ್ಯಾನ ಕೇಂದ್ರದ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಅದು ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲಾ ಸೂಚನೆ ಹಾಗೂ ನಿಯಮಗಳನ್ನು ಅನುಸರಿಸಬೇಕು. ಒಂದೊಮ್ಮೆ ಕೇಂದ್ರವನ್ನು ವಿಸ್ತರಿಸಬೇಕಾಗಿ ಬಂದಲ್ಲಿ, ಸಂಬಂಧಪಟ್ಟ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು’ ಎಂದು ಹೇಳಿದೆ.

ಆದರೆ ತನ್ನ ಆದೇಶವು ಇತರ ಅಕ್ರಮ ನಿರ್ಮಾಣಗಳಿಗೆ ಸಂಬಂಧಿಸಿಲ್ಲ. ಈ ನಿರ್ದಿಷ್ಟ ವಿಷಯಕ್ಕೆ ಮಾತ್ರ ಸಂಬಂಧಿಸಿದೆ ಎಂದು ಅದು ಸ್ಪಷ್ಟಪಡಿಸಿದೆ.