ಸಾರಾಂಶ
ದೇಶಾದ್ಯಂತ ವಿವಿಧ ನ್ಯಾಯಾಲಯಗಳ ಮುಂದೆ 8.82 ಲಕ್ಷಕ್ಕೂ ಹೆಚ್ಚು ಜಾರಿ ಅರ್ಜಿಗಳು ಬಾಕಿ ಇರುವುದು ‘ ನಿರಾಶಾದಾಯಕ’ ಮತ್ತು ‘ಆತಂಕಕಾರಿ’ ಎಂದು ಸುಪ್ರೀಂ ಬಣ್ಣಿಸಿದೆ. ಸಿವಿಲ್ ಪ್ರಕರಣಗಳಲ್ಲಿ ಹೊರಡಿಸಲಾದ ನ್ಯಾಯಾಲಯ ಆದೇಶ ಜಾರಿಗೊಳಿಸುವಂತೆ ಕೋರಿ ಸಲ್ಲಿಸುವ ಅರ್ಜಿಗಳಿಗೆ ಜಾರಿ ಅರ್ಜಿ ಎನ್ನುತ್ತಾರೆ.
ನವದೆಹಲಿ : ದೇಶಾದ್ಯಂತ ವಿವಿಧ ನ್ಯಾಯಾಲಯಗಳ ಮುಂದೆ 8.82 ಲಕ್ಷಕ್ಕೂ ಹೆಚ್ಚು ಜಾರಿ ಅರ್ಜಿಗಳು ಬಾಕಿ ಇರುವುದು ‘ಅತ್ಯಂತ ನಿರಾಶಾದಾಯಕ’ ಮತ್ತು ‘ಆತಂಕಕಾರಿ’ ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿದೆ. ಸಿವಿಲ್ ಪ್ರಕರಣಗಳಲ್ಲಿ ಹೊರಡಿಸಲಾದ ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸುವಂತೆ ಕೋರಿ ಅರ್ಜಿದಾರರು ಸಲ್ಲಿಸುವ ಅರ್ಜಿಗಳಿಗೆ ಜಾರಿ ಅರ್ಜಿಗಳು (ಎಪಿ- ಎಕ್ಸಿಕ್ಯೂಟಿವ್ ಪೆಟಿಶನ್) ಎನ್ನುತ್ತಾರೆ. ಕೋರ್ಟುಗಳು ಆದೇಶ ಹೊರಡಿಸಿದ ನಂತರೂ ಆದೇಶ ಜಾರಿಗೆ ಅರ್ಜಿದಾರರು ಕೋರಬೇಕಾಗುತ್ತದೆ.
ಕಳೆದ ಮಾರ್ಚ್ 6ರಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಪಂಕಜ್ ಮಿಥಲ್ ಅವರ ಪೀಠವು, ‘ಬಾಕಿ ಇರುವ ಎಲ್ಲ ಜಾರಿ ಅರ್ಜಿಗಳನ್ನು 6 ತಿಂಗಳಲ್ಲಿ ಇತ್ಯರ್ಥಪಡಿಸುವಂತೆ ಎಲ್ಲಾ ಹೈಕೋರ್ಟ್‌ಗಳು ತಮ್ಮ ವ್ಯಾಪ್ತಿಯಲ್ಲಿರುವ ಸಿವಿಲ್ ನ್ಯಾಯಾಲಯಗಳಿಗೆ ಸೂಚಿಸಬೇಕು’ ಎಂದು ಆದೇಶಿಸಿತ್ತು.
ಈ ಆದೇಶದ ಜಾರಿ ಬಗ್ಗೆ ಅದು ಈಗ ಪರಿಶೀಲನೆ ನಡೆಸಿದ್ದು, ‘ನಮಗೆ ಬಂದಿರುವ ಅಂಕಿಅಂಶಗಳು ಅತ್ಯಂತ ನಿರಾಶಾದಾಯಕವಾಗಿವೆ. ಇಲ್ಲಿಯವರೆಗೆ, ದೇಶಾದ್ಯಂತ 8,82,578 ಜಾರಿ ಅರ್ಜಿಗಳು ಬಾಕಿ ಇವೆ. ಮಾ.6ರಿಂದ 6 ತಿಂಗಳ ಅವಧಿಯಲ್ಲಿ ಒಟ್ಟು 3,38,685 ಜಾರಿ ಅರ್ಜಿಗಳನ್ನು ಮಾತ್ರ ತೀರ್ಮಾನಿಸಿ ವಿಲೇವಾರಿ ಮಾಡಲಾಗಿದೆ. ಈ ರೀತಿ ತೀರ್ಪು ಜಾರಿ ವಿಳಂಬ ನ್ಯಾಯಾಂಗದ ಅಣಕ ಹಾಗೂ ಅರ್ಥಹೀನ’ ಎಂದು ಪೀಠ ಹೇಳಿದೆ.
ಕರ್ನಾಟಕ ಹೈಕೋರ್ಟ್ ಬಗ್ಗೆ ಅಸಮಾಧಾನ
ನವದೆಹಲಿ: ‘ಜಾರಿ ಅರ್ಜಿಗಳ ವಿಚಾರದಲ್ಲಿ ದುರದೃಷ್ಟವಶಾತ್, ಕರ್ನಾಟಕ ಹೈಕೋರ್ಟ್ ನಮಗೆ ಅಗತ್ಯವಾದ ಡೇಟಾ ಒದಗಿಸಲು ವಿಫಲವಾಗಿದೆ. ಕಳೆದ 6 ತಿಂಗಳಲ್ಲಿ ಎಷ್ಟು ಇತ್ಯರ್ಥಪಡಿಸಲಾಗಿದೆ, ಎಷ್ಟು ಬಾಕಿ ಇವೆ ಎಂಬ ಮಾಹಿತಿ ನೀಡಿಲ್ಲ. ಹೀಗಾಗಿ ಮಾಹಿತಿ ನೀಡುವಂತೆ ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಪುನಃ ಜ್ಞಾಪಿಸಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
‘ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ನಮಗೆ ಅಗತ್ಯ ಮಾಹಿತಿ ಒದಗಿಸಲು ವಿಫಲರಾಗಿದ್ದು, ಈ ಬಗ್ಗೆ 2 ವಾರದಲ್ಲಿ ಅವರು ಸ್ಪಷ್ಟನೆ ನೀಡಬೇಕು’ ಎಂದು ಅದು ಸೂಚಿಸಿದೆ. ಮುಂದಿನ ವಿಚಾರಣೆಯನ್ನು 2026ರ ಏ.10ಕ್ಕೆ ನಿಗದಿಪಡಿಸಿದೆ.