ಸಾರಾಂಶ
ನವದೆಹಲಿ: ಜಾತಿಯ ಆಧಾರದಲ್ಲಿ ಅವಮಾನ ಮಾಡುವ ಉದ್ದೇಶ ಇರದ ಹೊರತು, ದೂರುದಾರ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದವನಾದ ಮಾತ್ರಕ್ಕೆ ಪ್ರಕರಣವನ್ನು ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ದಾಖಲಿಸಿಕೊಳ್ಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ.
‘ಅಸ್ಪೃಶ್ಯತೆ, ಜಾತಿ ತಾರತಮ್ಯ, ಪಾವಿತ್ರ್ಯತೆಗಳ ಆಧಾರದಲ್ಲಿ ಉದ್ದೇಶಪೂರ್ವಕವಾಗಿ ಅವಮಾನ ಆಗಿದ್ದಲ್ಲಿ 1989ರ ಕಾಯ್ದೆಯಡಿ ಅದನ್ನು ಪರಿಗಣಿಸಬಹುದು’ ಎಂದು ನ್ಯಾ। ಜೆ.ಬಿ. ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರ ಪೀಠ ಹೇಳಿದೆ. ಮರುನದನ್ ಮಲಯಾಳಿ ಎಂಬ ಯೂಟ್ಯೂಬ್ ಚಾನೆಲ್‌ನ ಶಾಜಾನ್ ಸ್ಕಾರಿಯಾಗೆ ನಿರೀಕ್ಷಣಾ ಜಾಮೀನು ನೀಡುವ ವೇಳೆ ಪೀಠ ಹೀಗೆ ಹೇಳಿದೆ.
ಶಾಸಕ ಪಿ.ವಿ.ಶ್ರೀನಿಜನ್ ತಮ್ಮ ಮೇಲೆ ದಾಖಲಿಸಿದ್ದ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ದುರುದ್ದೇಶ ಪೂರಿತ. ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಸ್ಕಾರಿಯಾ ಈ ಹಿಂದೆ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಜಾಮೀನು ತಿರಸ್ಕರಿಸಿದ ಹಿನ್ನೆಲೆ ಅವರು ಸುಪ್ರೀಂ ಮೊರೆ ಹೋಗಿದ್ದರು.
ಇದಕ್ಕೆ ಸ್ಪಂದಿಸಿದ ನ್ಯಾಯಾಲಯ, ‘ಸ್ಕಾರಿಯಾ ಅವರ ವಿಡಿಯೋದಲ್ಲಿ ಶಾಸಕನ ವಿರುದ್ಧ ದ್ವೇಷ ಕಾರುವ ಹಾಗೂ ವೈರತ್ವ ಹರಡುವ ಉದ್ದೇಶವಿರುವುದು ಕಂಡುಬಂದಿದೆ. ಇದರಲ್ಲಿ ದೂರುದಾರನನ್ನಷ್ಟೇ ಗುರುಯಾಗಿಸಲಾಗಿದೆಯೇ ಹೊರತು ಆತನ ಜಾತಿಯನ್ನಲ್ಲ’ ಎಂದು ಹೇಳಿದೆ.