ಸುಪ್ರೀಂ ಕೇಸುಗಳ ಮಾಹಿತಿ ಇನ್ನು ವಾಟ್ಸಾಪ್‌ನಲ್ಲೂ ಲಭ್ಯ

| Published : Apr 26 2024, 12:55 AM IST / Updated: Apr 26 2024, 05:05 AM IST

ಸಾರಾಂಶ

ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗುವ ಅರ್ಜಿಗಳು, ಅವುಗಳ ವಿಚಾರಣೆಯ ದಿನಾಂಕ ಇತ್ಯಾದಿ ಅಗತ್ಯ ಮಾಹಿತಿಗಳು ಇನ್ನುಮುಂದೆ ಸಂಬಂಧಪಟ್ಟ ವಕೀಲರು ಹಾಗೂ ಕಕ್ಷಿದಾರರಿಗೆ ವಾಟ್ಸಾಪ್‌ ಮೂಲಕ ರವಾನೆಯಾಗಲಿದೆ.

 ನವದೆಹಲಿ :  ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗುವ ಅರ್ಜಿಗಳು, ಅವುಗಳ ವಿಚಾರಣೆಯ ದಿನಾಂಕ ಇತ್ಯಾದಿ ಅಗತ್ಯ ಮಾಹಿತಿಗಳು ಇನ್ನುಮುಂದೆ ಸಂಬಂಧಪಟ್ಟ ವಕೀಲರು ಹಾಗೂ ಕಕ್ಷಿದಾರರಿಗೆ ವಾಟ್ಸಾಪ್‌ ಮೂಲಕ ರವಾನೆಯಾಗಲಿದೆ.

ಗುರುವಾರ ಒಂಭತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠದಲ್ಲಿ ವಿಚಾರಣೆ ಆರಂಭಿಸುವುದಕ್ಕೂ ಮೊದಲು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಈ ಮಾಹಿತಿ ಪ್ರಕಟಿಸಿದರು.

‘ಸುಪ್ರೀಂಕೋರ್ಟ್‌ನ ಮಾಹಿತಿ ತಂತ್ರಜ್ಞಾನ ವಿಭಾಗದ (ಐಸಿಟಿ) ಸೇವೆಗಳಿಗೆ ವಾಟ್ಸಾಪ್‌ ಜೋಡಣೆ ಮಾಡಲಾಗಿದೆ. ದೇಶದಲ್ಲಿ ಸರ್ವೋಚ್ಚ ನ್ಯಾಯಾಲಯ ಸ್ಥಾಪನೆಯಾದ 75ನೇ ವರ್ಷ ಇದೊಂದು ಸಣ್ಣ ಉಪಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ಆದರೆ ಇದು ಕಾಗದ ಹಾಗೂ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ದೊಡ್ಡ ಪರಿಣಾಮ ಉಂಟುಮಾಡಲಿದೆ. ಜನರ ನಿತ್ಯಜೀವನದಲ್ಲಿ ವಾಟ್ಸಾಪ್‌ ಸೇವೆಗಳು ವ್ಯಾಪಕವಾಗಿ ಬಳಕೆಯಾಗುತ್ತಿರುವುದರಿಂದ ಅದನ್ನು ಸುಪ್ರೀಂಕೋರ್ಟ್‌ನ ಪ್ರಕರಣಗಳ ಮಾಹಿತಿಯನ್ನು ಸಂಬಂಧಪಟ್ಟ ವಕೀಲರು ಹಾಗೂ ಕಕ್ಷಿದಾರರಿಗೆ ರವಾನಿಸುವುದಕ್ಕೂ ಇನ್ನುಮುಂದೆ ಬಳಸಿಕೊಳ್ಳಲಾಗುವುದು’ ಎಂದು ಚಂದ್ರಚೂಡ್‌ ಹೇಳಿದರು.

ಪ್ರಕರಣಕ್ಕೆ ಸಂಬಂಧಪಟ್ಟ ವಕೀಲರು ಹಾಗೂ ಕಕ್ಷಿದಾರರಿಗೆ ಕೇಸುಗಳ ಎಲೆಕ್ಟ್ರಾನಿಕ್‌ ಫೈಲಿಂಗ್, ಕಾಸ್‌ ಲಿಸ್ಟ್‌, ಆದೇಶಗಳು, ವಿಚಾರಣೆಯ ದಿನಾಂಕ ಹಾಗೂ ತೀರ್ಪುಗಳ ಸಂದೇಶ ವಾಟ್ಸಾಪ್‌ನಲ್ಲಿ ತನ್ನಿಂತಾನೇ ರವಾನೆಯಾಗಲಿದೆ. ಇವು ಸುಪ್ರೀಂಕೋರ್ಟ್‌ನ ವೆಬ್‌ಸೈಟಿನಲ್ಲೂ ಲಭ್ಯವಿರಲಿವೆ ಎಂದು ತಿಳಿಸಿದರು.

ನ್ಯಾಯಾಂಗದ ಕಲಾಪಗಳನ್ನು ವಿದ್ಯುನ್ಮಾನಗೊಳಿಸಲು ಕೇಂದ್ರ ಸರ್ಕಾರ 7000 ಕೋಟಿ ರು. ನೆರವು ನೀಡಿದೆ. ಜನರಿಗೆ ಅನುಕೂಲವಾಗುವಂತೆ ಎಲ್ಲವನ್ನೂ ಡಿಜಿಟಲೀಕರಣಗೊಳಿಸಬೇಕು ಎಂದು ಪ್ರಧಾನಿ ಸೂಚನೆ ನೀಡಿದ್ದಾರೆ. ಅದರಂತೆ ಇ-ಕೋರ್ಟ್‌ ಯೋಜನೆಯಡಿಯಲ್ಲಿ ಹಲವು ಉಪಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ನ್ಯಾ.ಚಂದ್ರಚೂಡ್‌ ಮಾಹಿತಿ ನೀಡಿದರು.