ಸಾರಾಂಶ
ನವದೆಹಲಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಪಡಿಸಿದ್ದ ಸುಪ್ರೀಂಕೋರ್ಟ್, ಆ ಯೋಜನೆಯ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಬೇಕು ಎಂಬ ಅರ್ಜಿಗಳನ್ನು ವಜಾಗೊಳಿಸಿದೆ.
‘ಚುನಾವಣಾ ಬಾಂಡ್ ಯೋಜನೆಯಲ್ಲಿ ಕ್ವಿಡ್ ಪ್ರೊ ಕೋ (ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿ, ಬೇರೊಂದು ರೀತಿಯಲ್ಲಿ ಉಪಕಾರ ಮಾಡಿಸಿಕೊಂಡ) ಅವ್ಯವಹಾರಗಳು ನಡೆದಿವೆ. ಹೀಗಾಗಿ ಎಸ್‌ಐಟಿ ತನಿಖೆಗೆ ಆದೇಶಿಸಬೇಕು ಎಂದು ಕಾಮನ್ ಕಾಸ್ ಮತ್ತು ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ ಎನ್‌ಜಿಒಗಳು ಅರ್ಜಿ ಸಲ್ಲಿಸಿದ್ದವು. ಅವುಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ತ್ರಿಸದಸ್ಯ ಪೀಠ, ‘ಕ್ವಿಡ್ ಪ್ರೊ ಕೋ ನಡೆದಿದೆ ಎಂಬುದು ಈ ಹಂತದಲ್ಲಿ ಊಹೆಯಷ್ಟೆ. ಹೀಗಾಗಿ ಸಂವಿಧಾನದ 32ನೇ ವಿಧಿಯಡಿ ಎಸ್‌ಐಟಿ ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ. ದೇಣಿಗೆಯನ್ನು ಲಂಚದ ರೂಪದಲ್ಲಿ ಪಡೆದು ಕೆಲಸ ಮಾಡಿಕೊಟ್ಟ ನಿರ್ದಿಷ್ಟ ಪ್ರಕರಣಗಳು ಇದ್ದರೆ ಅವುಗಳ ವಿರುದ್ಧ ಕ್ರಿಮಿನಲ್ ಕಾಯ್ದೆಗಳಡಿ ಕೇಸು ದಾಖಲಿಸಿ ತನಿಖೆ ನಡೆಸಬಹುದು’ ಎಂದು ಹೇಳಿ ಅರ್ಜಿಗಳನ್ನು ವಜಾಗೊಳಿಸಿತು.
ಚುನಾವಣಾ ಬಾಂಡ್‌ಗಳ ವಿರುದ್ಧ ಸಲ್ಲಿಸಿದ್ದ ಅರ್ಜಿಗಳಲ್ಲಿ ನ್ಯಾಯಾಂಗದ ವಿಮರ್ಶೆಯ ಅಗತ್ಯವಿತ್ತು. ಹೀಗಾಗಿ ವಿಚಾರಣೆ ನಡೆಸಿದೆವು. ಆದರೆ, ಲಂಚದ ಆರೋಪದ ಈ ಅರ್ಜಿಯಲ್ಲಿ ಕ್ರಿಮಿನಲ್ ವಿಚಾರಣೆಗೆ ಕಾಯ್ದೆಯಡಿ ಅವಕಾಶವಿರುವಾಗ ನ್ಯಾಯಾಂಗದ ವಿಮರ್ಶೆಯ ಅಗತ್ಯವಿರುವುದಿಲ್ಲ ಎಂದು ನ್ಯಾಯಪೀಠ ತನ್ನ ಕ್ರಮಕ್ಕೆ ಸಮರ್ಥನೆ ನೀಡಿತು.