ಬ್ಯಾಂಕಾಕ್‌ನಲ್ಲಿ ಶಾಲಾ ಬಸ್‌ಗೆ ಬೆಂಕಿ: 20 ಸಾವು

| Published : Oct 02 2024, 01:06 AM IST / Updated: Oct 02 2024, 01:07 AM IST

ಸಾರಾಂಶ

ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನ ಹೊರ ವಲಯದಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ಬಸ್‌ಗೆ ಬೆಂಕಿ ಹೊತ್ತಿಕೊಂಡು 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.

ಬ್ಯಾಂಕಾಕ್‌: ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನ ಹೊರ ವಲಯದಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ಬಸ್‌ಗೆ ಬೆಂಕಿ ಹೊತ್ತಿಕೊಂಡು 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.

ಕೇಂದ್ರ ಉತೈ ಥಾನಿ ಪ್ರಾಂತ್ಯದಿಂದ 44 ಪ್ರಯಾಣಿಕರನ್ನು ಹೊತ್ತಿದ್ದ ಬಸ್‌ ಆಯುತ್ಥಾಯ ಮತ್ತು ನೊಂಥಬುರಿ ಪ್ರಾಂತ್ಯದ ಕಡೆ ಪ್ರವಾಸಕ್ಕೆಂದು ತೆರಳುತ್ತಿತ್ತು. ಈ ವೇಳೆ ಬಸ್ಸಿನ ಮುಂಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಈ ದುರ್ಘಟನೆ ಸಂಭವಿಸಿದೆ.

ಅವಘಡದ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಈವೇಳೆಗಾಗಲೇ 20 ಜನರು ಮೃತಪಟ್ಟಿದ್ದಾರೆ. ಮೃತರ ಹೆಸರು ಬಹಿರಂಗಪಡಿಸಿಲ್ಲ. ಬಸ್‌ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢಾಶಾಲಾ ವಿಭಾಗದವರು ಎಂಬುದು ಗೊತ್ತಾಗಿದೆ.

==

ಸೆಕ್ಸ್‌ ವೇಳೆ ಯುವತಿಗೆ ರಕ್ತಸ್ರಾವ, ಆನ್‌ಲೈನ್‌ ಔಷಧಿ ಸರ್ಚ್‌ ವೇಳೆ ಸಾವುಅಹಮದಾಬಾದ್‌: ತನ್ನ ಪ್ರಿಯಕರನ ಜೊತೆ ಸೆಕ್ಸ್‌ ವೇಳೆ ಅತಿಯಾದ ರಸ್ತಸ್ರಾವದಿಂದ ಯುವತಿ ಸಾವನ್ನಪ್ಪಿದ ಘಟನೆ ಗುಜರಾತಿನಲ್ಲಿ ನಡೆದಿದೆ. ಮೃತ ಮಹಿಳೆ 23 ವರ್ಷದ ನರ್ಸಿಂಗ್‌ ಪದವೀಧರೆಯಾಗಿದ್ದು 27 ವರ್ಷದ ಪ್ರಿಯಕರನ ಜೊತೆ ನವಸಾರಿ ಜಿಲ್ಲೆಯ ಹೋಟೆಲ್‌ಗೆ ತೆರಳಿದ್ದಳು. ಅಲ್ಲಿ ಸೆಕ್ಸ್‌ ಮಾಡುವಾಗ ಯುವತಿಗೆ ರಕ್ತಸ್ರಾವವಾಗಿದೆ. ಈ ವೇಳೆ ಯುವಕ ಆ್ಯಂಬುಲೆನ್ಸ್‌ಗೆ ಕರೆ ಮಾಡದೇ, ಆಸ್ಪತ್ರೆಗೂ ಕರೆದುಕೊಂಡು ಹೋಗದೆ, ರಕ್ತಸ್ರಾವವನ್ನು ಹೇಗೆ ನಿಲ್ಲಿಸುವುದು ಎಂಬುದನ್ನು ಆನ್‌ಲೈನ್‌ನಲ್ಲಿ ಹುಡುಕಿದ್ದಾನೆ. ನಂತರ ಬಟ್ಟೆಯಿಂದ ರಕ್ತಸ್ರಾವವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಕೊನೆಗೆ ತನ್ನ ಸ್ನೇಹಿತರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಷ್ಟರಲ್ಲಿ ಯುವತಿ ಮೃತಪಟ್ಟಿದ್ದಾಳೆ. ಈ ಹಿನ್ನೆಲೆ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

==

ಮತ್ತೆ ಬಂಗಾಳ ಕಿರಿಯ ವೈದ್ಯರ ಮುಷ್ಕರ ಆರಂಭ

ಕೋಲ್ಕತಾ: ಸೆ.21ರಂದು 42 ದಿನಗಳ ಸುದೀರ್ಘ ಪ್ರತಿಭಟನೆಯನ್ನು ಅಂತ್ಯಗೊಳಿಸಿ ಭಾಗಶಃ ಕರ್ತವ್ಯಕ್ಕೆ ಮರಳಿದ್ದ ಬಂಗಾಳದ ಕಿರಿಯ ವೈದ್ಯರು ಮತ್ತೆ ಪೂರ್ಣ ಪ್ರಮಾಣದ ಮುಷ್ಕರಕ್ಕೆ ಇಳಿದಿದ್ದಾರೆ. ಆಸ್ಪತ್ರೆಗಳಲ್ಲಿ ಸುರಕ್ಷತೆ ಮತ್ತು ಭದ್ರತೆ ಒದಗಿಸುವ ಬಗ್ಗೆ ಸರ್ಕಾರ ನೀಡಿದ್ದ ಭರವಸೆ ಈಡೇರದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.‘ಸುರಕ್ಷತೆ, ಭದ್ರತೆ ಸೇರಿದಂತೆ ಅನೇಕ ವಿಚಾರಗಳಲ್ಲಿ ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ನೀಡಲಾಗಿದ್ದ ಭರವಸೆ ಇನ್ನೂ ಈಡೇರಿಲ್ಲ. ಇಂದು ಪ್ರತಿಭಟನೆಯ 52ನೇ ದಿನವಾಗಿದ್ದು, ನಮ್ಮ ಮೇಲಿನ ಆಕ್ರಮಣಗಳು ಮುಂದುವರೆದಿವೆ. ಹೀಗಿರುವಾಗ ಮುಷ್ಕರವನ್ನು ಮುಂದುವರೆಸದೆ ಬೇರೆ ದಾರಿಯಿಲ್ಲ. ಭರವಸೆ ಈಡೇರಿಸುವ ನಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುವವರೆಗೂ ಇದು ಮುಂದುವರೆಯುವುದು’ ಎಂದು ಪ್ರತಿಭಟನಾನಿರತ ವೈದ್ಯರು ಹೇಳಿದ್ದಾರೆ.ಅಂತೆಯೇ ಆಜಿ ಕರ್‌ ಕಾಲೇಜಿನ ವೈದ್ಯೆ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಸಿಬಿಐ ಆಲಸ್ಯ ತೋರುತ್ತಿದ್ದು, ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ ಎಂದು ಆರೋಪಿಸಿದ ವೈದ್ಯರು ಬುಧವಾರ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದಾರೆ.ಮುಷ್ಕರದಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿನ ಸೇವೆಗಳಲ್ಲಿ ತೊಡಕುಂಟಾಗಿದ್ದು, ಹಿರಿಯ ವೈದ್ಯರನ್ನೇ ಒಳ ಹಾಗೂ ಹೊರ ರೋಗಿಗಳ ವಿಭಾಗ ಮತ್ತು ತುರ್ತು ಸೇವೆ ವಿಭಾಗದಲ್ಲಿ ನಿಯೋಜಿಸಲಾಗಿದೆ.ಆರೋಗ್ಯ ಕಾರ್ಯದರ್ಶಿಯ ವಜಾ, ಸಿಸಿಟಿವಿ ಅಳವಡಿಕೆ, ಆಸ್ಪತ್ರೆಗಳಿಗೆ ಪೊಲೀಸ್‌ ಭದ್ರತೆ, ಖಾಲಿ ಹುದ್ದೆಗಳಿಗೆ ವೈದ್ಯ, ನರ್ಸ್‌, ಆರೊಗ್ಯ ಕಾರ್ಯಕರ್ತರ ನೇಮಕ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.

==

ಸೆಪ್ಟೆಂಬರಲ್ಲಿ 1.73 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ: ಕರ್ನಾಟಕ ನಂ.2 ರಾಜ್ಯನವದೆಹಲಿ: ಕಳೆದ ಸೆಪ್ಟೆಂಬರ್‌ನಲ್ಲಿ ಒಟ್ಟು 1.73 ಲಕ್ಷ ಕೋಟಿ ರು.ನಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹ ಆಗಿದೆ. ಇದು ಆಗಸ್ಟ್‌ ತಿಂಗಳ ಸಂಗ್ರಹಕ್ಕಿಂತ ಶೇ. 6.5ರಷ್ಟು ಹೆಚ್ಚಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಎಸ್ಟಿ ಸಂಗ್ರಹ ಪ್ರಮಾಣ 1.63 ಲಕ್ಷ ಕೋಟಿ ರು.ನಷ್ಟಿತ್ತು ಎಂದು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಹೇಳಿವೆ. ಮಹಾರಾಷ್ಟ್ರ 26369 ಕೋಟಿ ರು., ಕರ್ನಾಟಕ 12642 ಕೋಟಿ ರು., ತಮಿಳುನಾಡು 11024 ಕೋಟಿ ರು., ಗುಜರಾತ್‌ 10153 ಕೋಟಿ ರು. ಮತ್ತು ಹರ್ಯಾಣ 9957 ಕೋಟಿ ರು. ಜಿಎಸ್ಟಿ ಸಂಗ್ರಹದೊಂದಿಗೆ ಮೊದಲ 5 ಸ್ಥಾನದಲ್ಲಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕರ್ನಾಟಕದ ಸಂಗ್ರಹ ಶೇ.18ರಷ್ಟು ಹೆಚ್ಚಿದೆ.

==