ಉಗ್ರರ ಬೆಂಬಲದೊಂದಿಗೆ ಕಾಂಗ್ರೆಸ್‌ ಸ್ಪರ್ಧೆ: ಬಿಜೆಪಿ

| Published : Apr 04 2024, 01:06 AM IST / Updated: Apr 04 2024, 05:46 AM IST

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್‌ ಭಯೋತ್ಪಾದಕರ ಬೆಂಬಲದೊಂದಿಗೆ ಎದುರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್‌ ಭಯೋತ್ಪಾದಕರ ಬೆಂಬಲದೊಂದಿಗೆ ಎದುರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟಕ್ಕೆ ನಿಷೇಧಿತ ಪಿಎಫ್‌ಐ ಸಂಘಟನೆಯ ರಾಜಕೀಯ ಮುಖವಾಣಿಯಾದ ಎಸ್‌ಡಿಐಪಿ ಬೆಂಬಲ ಘೋಷಣೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಈ ಆರೋಪ ಮಾಡಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಪ್ರೇಮ್‌ ಶುಕ್ಲಾ, ‘ಒಂದೆಡೆ ರಾಹುಲ್‌ ಗಾಂಧಿ ಮೊಹಬ್ಬತ್‌ ಕೀ ದುಕಾನ್‌ (ಪ್ರೀತಿಯ ಅಂಗಡಿ) ಆರಂಭಿಸುವ ಮಾತುಗಳನ್ನು ಆಡುತ್ತಾರೆ. ಮತ್ತೊಂದೆಡೆ ಮೊಹಬ್ಬತ್‌ ಕಾ ಪೈಗಾಮ್‌ (ಪ್ರೀತಿಯ ಸಂದೇಶ) ಅನ್ನು ಉಗ್ರರು ಮತ್ತು ಪ್ರತ್ಯೇಕತಾವಾದಿಗಳಿಗೆ ರವಾನಿಸುವ ಕೆಲಸ ಮಾಡುತ್ತಾರೆ. 

ಒಂದೆಡೆ ರಾಹುಲ್‌ ಗಾಂಧಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಿಂತು ದೇಶಕ್ಕೆ ಬೆಂಕಿ ಹಚ್ಚುವ ಮಾತುಗಳನ್ನು ಆಡುತ್ತಾರೆ, ಮತ್ತೊಂದೆಡೆ ಎಸ್‌ಡಿಪಿಐನಿಂದ ರಾಜಕೀಯ ಬೆಂಬಲ ಪಡೆಯುತ್ತಾರೆ. ಆ ಸಂಘಟನೆ ಪಿಎಫ್‌ಐ ಮತ್ತು ಭಯೋತ್ಪಾದನಾ ಕೃತ್ಯಗಳನ್ನು ಬೆಂಬಲಿಸುವಂಥದ್ದು’ ಎಂದು ಟೀಕಿಸಿದ್ದಾರೆ.