ಸಾರಾಂಶ
ನ್ಯೂಯಾರ್ಕ್: ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯನಾಗಿ ಭಾರತವನ್ನು ಸೇರ್ಪಡೆ ಮಾಡಿಕೊಳ್ಳಬೇಕು’ ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದಾರೆ. ತನ್ಮೂಲಕ ಭಾರತದ ಕಾಯಂ ಸದಸ್ಯತ್ವದ ಪರ ಅಮೆರಿಕ ಮತ್ತು ಫ್ರಾನ್ಸ್ ದೇಶಗಳು ಆಗ್ರಹಿಸಿದ ಬೆನ್ನಲ್ಲೇ ಇನ್ನೊಂದು ಪ್ರಮುಖ ಜಾಗತಿಕ ಶಕ್ತಿ ಕೂಡ ಅದೇ ಆಗ್ರಹ ಮಂಡಿಸಿದಂತಾಗಿದೆ.
ಅಲ್ಲದೆ, ಚೀನಾ ಹೊರತುಪಡಿಸಿ, ಮಂಡಳಿಯ 5 ಕಾಯಂ ಸದಸ್ಯರಲ್ಲಿ ನಾಲ್ವರಿಂದ ಭಾರತಕ್ಕೆ ಬೆಂಬಲ ದೊರಕಿದಂತಾಗಿದೆ.ವಿಶ್ವಸಂಸ್ಥೆಯಲ್ಲಿ ನಡೆಯುತ್ತಿರುವ ವಾರ್ಷಿಕ ಸಮಾವೇಶದಲ್ಲಿ ಗುರುವಾರ ಮಾತನಾಡಿದ ಸ್ಟಾರ್ಮರ್, ‘ವಿಶ್ವಸಂಸ್ಥೆಯಲ್ಲಿ ಆಫ್ರಿಕಾ, ಬ್ರೆಜಿಲ್, ಭಾರತ, ಜಪಾನ್ ಹಾಗೂ ಜರ್ಮನಿಯನ್ನು ಕಾಯಂ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಚುನಾಯಿತ ಸದಸ್ಯ ರಾಷ್ಟ್ರಗಳಿಗೆ ಹೆಚ್ಚು ಸ್ಥಾನ ನೀಡಬೇಕು’ ಎಂದು ಪ್ರತಿಪಾದಿಸಿದರು.
ಸದ್ಯ ವಿಶ್ವಸಂಸ್ಥೆಯಲ್ಲಿ ರಷ್ಯಾ, ಬ್ರಿಟನ್, ಚೀನಾ, ಫ್ರಾನ್ಸ್ ಹಾಗೂ ಅಮೆರಿಕ ಕಾಯಂ ಸದಸ್ಯರಾಗಿವೆ. ಇವುಗಳಿಗೆ ವೀಟೋ ಅಧಿಕಾರವಿದೆ. ಇನ್ನುಳಿದಂತೆ 10 ಕಾಯಂ ಅಲ್ಲದ ಸದಸ್ಯ ರಾಷ್ಟ್ರಗಳಿದ್ದು, ಅವು ಎರಡು ವರ್ಷಗಳ ಅವಧಿಗೆ ಆಯ್ಕೆಯಾಗುತ್ತವೆ. ಭಾರತವು ದಶಕಗಳಿಂದ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವದ ಆಕಾಂಕ್ಷಿಯಾಗಿದ್ದು, ಅದಕ್ಕೆ ಚೀನಾ ಹೊರತುಪಡಿಸಿ ಭದ್ರತಾ ಮಂಡಳಿಯಲ್ಲಿರುವ ಎಲ್ಲಾ ದೇಶಗಳು ಬೆಂಬಲಿಸುತ್ತಿವೆ. ರಷ್ಯಾ ಕೂಡ ಈ ಹಿಂದೆ ಬೆಂಬಲಿಸಿತ್ತು.