ಸಾರಾಂಶ
ಛತ್ತೀಸ್‌ಗಢದಲ್ಲಿ ಕೆಂಪು ಉಗ್ರರ ವಿರುದ್ಧ ಕಾರ್ಯಾ ಚರಣೆಯನ್ನು ಭರ್ಜರಿಯಾಗಿ ಮುಂದುವರೆಸಿರುವ ಭದ್ರತಾಪಡೆಗಳು, ಭಾನುವಾರ ಬೆಳ್ಳಂಬೆಳಗ್ಗೆ 31 ನಕ್ಸಲರನ್ನು ಹೊಡೆದುರುಳಿಸಿದ್ದಾರೆ.
ಬಿಜಾಪುರ: ಛತ್ತೀಸ್‌ಗಢದಲ್ಲಿ ಕೆಂಪು ಉಗ್ರರ ವಿರುದ್ಧ ಕಾರ್ಯಾ ಚರಣೆಯನ್ನು ಭರ್ಜರಿಯಾಗಿ ಮುಂದುವರೆಸಿರುವ ಭದ್ರತಾಪಡೆಗಳು, ಭಾನುವಾರ ಬೆಳ್ಳಂಬೆಳಗ್ಗೆ 31 ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ಇದರೊಂದಿಗೆ ಈ ವರ್ಷವೊಂದರಲ್ಲೇ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ನಕ್ಸಲರ ಸಂಖ್ಯೆ 81ಕ್ಕೆ ಏರಿದೆ.
ಈ ಕಾರ್ಯಾಚರಣೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಕೂಡ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.ಖಚಿತ ಮಾಹಿತಿ ಮೇರೆಗೆ ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನದ ದಟ್ಟಾರಣ್ಯದಲ್ಲಿ ನಕ್ಸಲರ ಅಡಗುತಾಣದ ಮೇಲೇ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಮತ್ತು ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) 650 ಜನರ ತಂಡ ಭಾನುವಾರ ಬೆಳಗ್ಗೆ ದಾಳಿ ನಡೆಸಿತ್ತು.
ಈ ವೇಳೆ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಭಾರೀ ಪ್ರಮಾಣದ ಗುಂಡಿನ ಚಕಮಕಿ ನಡೆದಿದೆ.ಹಲವು ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿ ಬಳಿಕ ಸ್ಥಳದಲ್ಲಿ 31 ನಕ್ಸಲರು ಶವ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಎಕೆ-47, ಐಎನ್‌ಎಸ್‌ಎಎಸ್, ಎಸ್‌ಎಲ್‌ಆರ್ ಮತ್ತು 303 ರೈಫಲ್ಸ್‌ಗಳು, ಬ್ಯಾರೆಲ್ ಗ್ರೆನೇಡ್ ಲಾಂಚರ್‌ಗಳು, ಸ್ಫೋಟಕ ಪತ್ತೆಯಾಗಿದೆ.
ಗುಂಡಿನ ಚಕಮಕಿ ವೇಳೆ ಜಿಲ್ಲಾ ಮೀಸಲು ಪಡೆ ಹಾಗೂ ವಿಶೇಷ ಕಾರ್ಯಪಡೆಯ ಇಬ್ಬರು ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಇಬ್ಬರು ಜವಾನರನ್ನು ಏರ್‌ಲಿಫ್ಟ್ ಮಾಡಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದ್ದು, ಸುತ್ತಮುತ್ತ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದೆ ಎಂದು ಬಸ್ತಾರ್ ರೇಂಜ್‌ನ ಇನ್ಸ್‌ಪೆಕ್ಟರ್ ಜನರಲ್ ಸುಂದರ್‌ರಾಜ್ ಪಿ. ಮಾಹಿತಿ ನೀಡಿದ್ದಾರೆ.81 ನಕ್ಸಲರು ಬಲಿ:ರಾಜ್ಯದಲ್ಲಿ ಈ ವರ್ಷವೊಂದರಲ್ಲೇ ಭದ್ರತಾ ಪಡೆಗಳ ಗುಂಡಿಗೆ 81 ನಕ್ಸಲರು ಬಲಿಯಾಗಿದ್ದಾರೆ. ಈ ಪೈಕಿ 65 ಜನರು ಬಸ್ತರ್ ವಲಯವೊಂದರಲ್ಲೇ ಹತರಾಗಿದ್ದಾರೆ.
ಕಳೆದ ವರ್ಷ ಕೂಡಾ ವಿವಿಧ ಕಾರ್ಯಾಚರಣೆಯಲ್ಲಲಿ 219 ನಕ್ಸಲರು ಹತರಾಗಿದ್ದರು.ಕಳೆದ ವರ್ಷದ ಅ.4ರಂದು ಅಬುಜ್‌ಮದ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ ವೇಳೆ 38 ನಕ್ಸಲರು ಹತರಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ನಕ್ಸಲರ ಬೇಟೆಯ ಅತಿದೊಡ್ಡ ಪ್ರಕರಣವಾಗಿತ್ತು.
2026ಕ್ಕೆ ದೇಶದಲ್ಲಿ ನಕ್ಸಲಿಸಂ ಅಂತ್ಯ: ಅಮಿತ್ ಶಾ2026ರ ಮಾರ್ಚ್ 31ರ ಮೊದಲು ನಾವು ದೇಶದಿಂದ ನಕ್ಸಲಿಸಂನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತೇವೆ. ಇದರಿಂದ ದೇಶದ ನಾಗರಿಕರು ಪ್ರಾಣ ಕಳೆದುಕೊಳ್ಳಬಾರದು ಎನ್ನುವ ನನ್ನ ಸಂಕಲ್ಪವನ್ನು ಪುನರುಚ್ಚರಿಸುತ್ತೇನೆ. ದೇಶವನ್ನು ನಕ್ಸಲಿಸಂ ಮುಕ್ತಗೊಳಿಸುವ ನಿಟ್ಟಿನಲ್ಲಿ ಬಿಜಾಪುರದ ಭದ್ರತಾ ಪಡೆಗಳು ಬಹುದೊಡ್ಡ ಯಶಸ್ಸನ್ನು ಪಡೆದಿವೆ.
- ಅಮಿತ್ ಶಾ, ಕೇಂದ್ರ ಗೃಹ ಸಚಿವ
ಮಾನವ ವಿರೋಧಿ ನಕ್ಸಲಿಸಂನ್ನು ಕೊನೆಗೊಳಿಸುವ ಪ್ರಯತ್ನದಲ್ಲಿ ಭದ್ರತಾ ಪಡೆಗಳು ತನ್ನ ಇಬ್ಬರು ವೀರ ಸೈನಿಕರನ್ನು ಕಳೆದುಕೊಂಡಿದೆ. ದೇಶ ಈ ವೀರರಿಗೆ ಯಾವಾಗಲೂ ಋಣಿಯಾಗಿರುತ್ತದೆ. ಹುತಾತ್ಮ ಸೈನಿಕರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ ವ್ಯಕ್ತ ಪಡಿಸುತ್ತೇನೆ