ರಾಮರಥವನ್ನು 566 ಕಿ.ಮೀ. ದೂರ ಕೂದಲಿನಲ್ಲಿ ಎಳೆದು ಹೊರಟ ಸಂತ!

| Published : Jan 21 2024, 01:34 AM IST / Updated: Jan 21 2024, 11:34 AM IST

ರಾಮರಥವನ್ನು 566 ಕಿ.ಮೀ. ದೂರ ಕೂದಲಿನಲ್ಲಿ ಎಳೆದು ಹೊರಟ ಸಂತ!
Share this Article
  • FB
  • TW
  • Linkdin
  • Email

ಸಾರಾಂಶ

ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮಧ್ಯಪ್ರದೇಶದ ಸಂತರೊಬ್ಬರು ತಮ್ಮ ತಲೆ ಕೂದಲಿನ ಸಹಾಯದಿಂದ 566 ಕಿಲೋಮೀಟರ್‌ ದೂರ ರಾಮರಥವನ್ನು ಎಳೆದುಕೊಂಡು ಅಯೋಧ್ಯೆಯತ್ತ ಸಾಗುತ್ತಿದ್ದಾರೆ.

ರಾಯ್‌ ಬರೇಲಿ: ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮಧ್ಯಪ್ರದೇಶದ ಸಂತರೊಬ್ಬರು ತಮ್ಮ ತಲೆ ಕೂದಲಿನ ಸಹಾಯದಿಂದ ರಾಮರಥವನ್ನು ಎಳೆದುಕೊಂಡು ಅಯೋಧ್ಯೆಯತ್ತ ಸಾಗುತ್ತಿದ್ದಾರೆ.

ಮಧ್ಯಪ್ರದೇಶದ ದಾಮೋಹ್‌ನ ಸಂತ ಬದ್ರಿ ತಮ್ಮ ತಲೆಕೂದಲಿನಿಂದ ರಥ ಎಳೆದುಕೊಂಡು ಸಾಗುತ್ತಿದ್ದು, ಜ.11ರಂದು ತಮ್ಮ ಪ್ರಯಾಣ ಆರಂಭಿಸಿದ್ದರು. ಪ್ರತಿದಿನ ಸುಮಾರು 50 ಕಿ.ಮೀ.ನಂತೆ ಪ್ರಯಾಣಿಸಿರುವ ಅವರು ಇದೀಗ ರಾಯ್‌ಬರೇಲಿ ತಲುಪಿದ್ದಾರೆ. 

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ರಾಮಲಲ್ಲಾನ ಮೂರ್ತಿ ಸ್ಥಾಪನೆಯಾದರೆ ತಲೆ ಕೂದಲಿನಿಂದ ರಥ ಎಳೆದುಕೊಂಡು ಬರುವುದಾಗಿ ಸಂತ ಭದ್ರಿ 1992ರಲ್ಲಿ ಸಂಕಲ್ಪ ಮಾಡಿದ್ದರು. ಅದರಂತೆ ಈಗ ರಥ ಎಳೆದುಕೊಂಡು ಅಯೋಧ್ಯೆಯತ್ತ ಪ್ರಯಾಣ ಮಾಡುತ್ತಿದ್ದಾರೆ.

ಅಲ್ಲದೇ ತಮ್ಮ ಯಾತ್ರೆಯ ಬಗ್ಗೆ ಮಾತನಾಡಿರುವ ಅವರು, ಸನಾತನ ಧರ್ಮ ಎಲ್ಲಿರುತ್ತದೋ ಅಲ್ಲಿ ಎಲ್ಲವೂ ಇರುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ ಅವರು ಇಲ್ಲದಿದ್ದರೆ ರಾಮಮಂದಿರ ನಿರ್ಮಾಣವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ರಾಮಮಂದಿರ ಉದ್ಘಾಟನೆಗೆ 55 ದೇಶದ 100 ಗಣ್ಯರಿಗೆ ಆಹ್ವಾನ
ನವದೆಹಲಿ: ಜ.22ರಂದು ನಡೆಯಲಿರುವ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ 55 ರಾಷ್ಟ್ರಗಳಿಂದ 100 ವಿದೇಶಿ ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ ಜಂಟಿ ಕಾರ್ಯದರ್ಶಿ ಸ್ವಾಮಿ ವಿಜ್ಞಾನಾನಂದ ತಿಳಿಸಿದ್ದಾರೆ.

ಶನಿವಾರ ಮಾಹಿತಿ ನೀಡಿದ ಅವರು, ‘ಶ್ರೀರಾಮನ ವಂಶಜೆ ಎಂದು ಹೇಳಿಕೊಳ್ಳುವ ಕೊರಿಯಾ ರಾಣಿಯೂ ಸೇರಿದಂತೆ 6 ಭೂಖಂಡಗಳಲ್ಲಿರುವ 55 ದೇಶಗಳಿಂದ 100 ಗಣ್ಯರನ್ನು ಆಹ್ವಾನಿಸಲಾಗಿದೆ. 

ಇದರಲ್ಲಿ ಜನಪ್ರತಿನಿಧಿಗಳು ಮತ್ತು ರಾಯಭಾರಿಗಳೂ ಸೇರಿದ್ದಾರೆ. ಭಾರತದ ವಾಯುಮಾರ್ಗದಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣ ಎಲ್ಲರಿಗೂ ಮುಂಜಾಗ್ರತಾ ಕ್ರಮವಾಗಿ 1 ದಿನ ಮೊದಲೇ ಭಾರತಕ್ಕೆ ಬರಲು ಕೋರಲಾಗಿದೆ’ ಎಂದು ತಿಳಿಸಿದರು.

ಮೂರ್ತಿ ಚಿತ್ರ ಬಿಡುಗಡೆಗೆ ಆಕ್ಷೇಪ
ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿರುವ ಭವ್ಯ ಮಂದಿರದಲ್ಲಿ ಜ.22ರಂದು ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾ ಮೂರ್ತಿಯ ಕಣ್ಣುಗಳನ್ನು ಪ್ರಾಣಪ್ರತಿಷ್ಠೆಗಿಂತ ಮೊದಲು ತೋರಿಸುವಂತಿಲ್ಲ. 

ಕಣ್ಣಿನ ಬಟ್ಟೆ ಬಿಚ್ಚಿದ ರೂಪದಲ್ಲಿ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಚಿತ್ರವನ್ನು ಬಿಡುಗಡೆ ಮಾಡಿದ್ದು ಯಾರು ಮತ್ತು ಅದು ಹೇಗೆ ವೈರಲ್‌ ಆಯಿತು ಎಂಬ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ರಾಮಜನ್ಮಭೂಮಿ ದೇಗುಲದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಹೇಳಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆಯ ಜೊತೆ ಶನಿವಾರ ಮಾತನಾಡಿರುವ ಅವರು, ‘ಪ್ರಾಣಪ್ರತಿಷ್ಠೆ ಪೂರ್ಣವಾಗುವವರೆಗೂ ರಾಮನ ಮೂರ್ತಿಯ ಕಣ್ಣುಗಳನ್ನು ತೋರಿಸುವಂತಿಲ್ಲ. ಕಣ್ಣಿನ ಪಟ್ಟಿ ಬಿಚ್ಚಿದ ರೂಪದಲ್ಲಿ ಹರಿದಾಡುತ್ತಿರುವ ರಾಮನ ಮೂರ್ತಿಯ ಚಿತ್ರ ನಿಜವಾದದ್ದಲ್ಲ. 

ಕಣ್ಣುಗಳನ್ನು ತೋರಿಸುವ ಮೂರ್ತಿಯ ಚಿತ್ರ ಹರಿಬಿಟ್ಟಿದ್ದರೆ ಆ ಕೆಲಸ ಮಾಡಿದವರು ಯಾರು ಎಂದು ತನಿಖೆ ನಡೆಸಬೇಕಾಗುತ್ತದೆ’ ಎಂದು ಹೇಳಿದರು.‘ಎಲ್ಲಾ ವಿಧಿವಿಧಾನಗಳೂ ಈ ಹಿಂದೆ ಹೇಳಿದಂತೆಯೇ ನಡೆಯಲಿವೆ. 

ಆದರೆ ರಾಮಲಲ್ಲಾ ಮೂರ್ತಿಯ ಕಣ್ಣುಗಳನ್ನು ಮಾತ್ರ ಪ್ರಾಣಪ್ರತಿಷ್ಠೆಯವರೆಗೂ ತೋರಿಸುವುದಿಲ್ಲ. ಟೆಂಟ್‌ನಲ್ಲಿರುವ ಹಳೆಯ ರಾಮಲಲ್ಲಾ ಮೂರ್ತಿಯನ್ನು ಕೂಡ ಹೊಸ ದೇಗುಲದ ಗರ್ಭಗುಡಿಯಲ್ಲೇ ಕೂರಿಸಲಾಗುವುದು. 

ಅದಕ್ಕೆ ಪ್ರತ್ಯೇಕ ಮುಹೂರ್ತ ಅಗತ್ಯವಿಲ್ಲ. ಹೊಸ ಮೂರ್ತಿಯ ಪ್ರತಿಷ್ಠಾಪನೆಗೆ ಮಾತ್ರ ಮುಹೂರ್ತ ನೋಡಬೇಕಾಗುತ್ತದೆ. ಹಳೆಯ ಮೂರ್ತಿಯನ್ನು ಪುನಃ ಕೂರಿಸುವುದು ಒಂದು ಪದ್ಧತಿಯಷ್ಟೆ’ ಎಂದು ತಿಳಿಸಿದರು.

ಟೆಂಟ್‌ನಲ್ಲಿರುವ ಹಳೆಯ ಮೂರ್ತಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಾತ್ಕಾಲಿಕ ದೇಗುಲಕ್ಕೆ ತೆಗೆದುಕೊಂಡು ಹೋಗಿ ಕೂರಿಸಿದ್ದರು. ಅವರೇ ಈಗ ಅಲ್ಲಿಂದ ಹಳೆಯ ಮೂರ್ತಿಯನ್ನು ಹೊಸ ಗರ್ಭಗುಡಿಗೆ ತರಬಹುದು ಎಂದು ಪ್ರಶ್ನೆಯೊಂದಕ್ಕೆ ಸತ್ಯೇಂದ್ರ ದಾಸ್‌ ಉತ್ತರಿಸಿದರು.

ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿದ ರಾಮಲಲ್ಲಾನ ಮೂರ್ತಿಯನ್ನು ಜ.22ರಂದು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅದನ್ನು ಈಗಾಗಲೇ ಗರ್ಭಗುಡಿಯಲ್ಲಿ ಕೂರಿಸಲಾಗಿದೆ. ಆದರೆ ಅದರ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ. 

ಆ ಚಿತ್ರ ಗುರುವಾರವೇ ಮಾಧ್ಯಮಗಳಿಗೆ ಲಭಿಸಿತ್ತು. ಆದರೆ ಶುಕ್ರವಾರ ಕಣ್ಣಿನ ಬಟ್ಟೆ ಬಿಚ್ಚಿದ ರಾಮನ ಮೂರ್ತಿಯ ಚಿತ್ರವೊಂದು ವೈರಲ್‌ ಆಗಿದೆ. ಅದಕ್ಕೆ ಸತ್ಯೇಂದ್ರ ದಾಸ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ ಶಾರದಾ ಪೀಠದಿಂದ ಅಯೋಧ್ಯೆಗೆ ಪವಿತ್ರ ಜಲ!

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠದಿಂದ ಪವಿತ್ರ ಜಲವನ್ನು ಸಂಗ್ರಹಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಅದನ್ನು ಅಯೋಧ್ಯೆಗೆ ಕಳುಹಿಸಿದ್ದಾರೆ. ಈ ಜಲವನ್ನು ಪಿಒಕೆಯಿಂದ ಬ್ರಿಟನ್‌ಗೆ ಕಳುಹಿಸಿ ಅಲ್ಲಿಂದ ಅಯೋಧ್ಯೆಗೆ ರವಾನಿಸಲಾಗಿದೆ. 

ಭಾರತ ಮತ್ತು ಪಾಕಿಸ್ತಾನದ ನಡುವಿನ ಪೋಸ್ಟಲ್‌ ಸೇವೆಯನ್ನು ನಿರ್ಬಂಧಿಸಿರುವ ಕಾರಣ ಬ್ರಿಟನ್‌ಗೆ ಕಳುಹಿಸಿ, ಅಲ್ಲಿಂದ ಭಾರತಕ್ಕೆ ರವಾನಿಸಲಾಗಿದೆ ಎಂದು ‘ಕಾಶ್ಮೀರ ಶಾರದಾ ಸಮಿತಿ ಉಳಿಸಿ’ ಸಂಸ್ಥೆಯ ಸ್ಥಾಪಕ ರವೀಂದ್ರ ಪಂಡಿತ್‌ ಹೇಳಿದ್ದಾರೆ.