ಸಾರಾಂಶ
ಭುವನೇಶ್ವರ : ಛತ್ತೀಸ್‌ಗಢ-ಒಡಿಶಾ ಗಡಿಯಲ್ಲಿ ಹತನಾದ ಕುಖ್ಯಾತ ನಕ್ಸಲೀಯ ನಾಯಕ ರಾಮಚಂದ್ರ ರೆಡ್ಡಿ ಅಲಿಯಾಸ್ ಛಲಪತಿಯನ್ನು ಪತ್ತೆ ಮಾಡಲು ನೆರವಾಗಿದ್ದು ಆತ ನಕ್ಸಲೀಯ ಆದ ತನ್ನ ಪತ್ನಿ ಜತೆ ತೆಗೆಸಿಕೊಂಡ ಸೆಲ್ಫಿ ಎಂಬ ಕುತೂಹಲದ ವಿಷಯ ಬೆಳಕಿಗೆ ಬಂದಿದೆ.
ದಶಕಗಳ ಕಾಲ ಆತ ಒಡಿಶಾ-ಛತ್ತೀಸ್‌ಗಢ, ಆಂಧ್ರಪ್ರದೇಶದಲ್ಲಿ ನಿಗೂಢವಾಗಿ ಕೆಲಸ ಮಾಡುತ್ತಿದ್ದ. ಆತನ ಮುಖಚರ್ಯೆ ಬಗ್ಗೆ ಪೊಲೀಸರಿಗೆ ಅಷ್ಟಾಗಿ ಗೊತ್ತಿರಲಿಲ್ಲ.
ಈ ನಡುವೆ, 2016ರಲ್ಲಿ ಆಂಧ್ರಪ್ರದೇಶದಲ್ಲಿ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವಿನ ಎನ್‌ಕೌಂಟರ್ ನಂತರ, ಘಟನಾ ಸ್ಥಳದಲ್ಲಿ ಒಂದು ಸ್ಮಾರ್ಟ್‌ಫೋನ್ ಸಿಕ್ಕಿತ್ತು. ಇದರಲ್ಲಿ ಆಂಧ್ರ ಒಡಿಶಾ ಬಾರ್ಡರ್ ಸ್ಪೆಷಲ್ ಝೋನಲ್ ಕಮಿಟಿ ನಕ್ಸಲ್ ಸಂಘಟನೆಯ ‘ಉಪ ಕಮಾಂಡರ್’ ಆಗಿದ್ದ ಚಲಪತಿ, ತನ್ನ ಪತ್ನಿ ಅರುಣಾ ಜತೆ ತೆಗೆಸಿಕೊಂಡಿದ್ದ ಸೆಲ್ಫಿ ಫೋಟೋ ಸಿಕ್ಕಿತ್ತು. ಆಗ ಆತನ ಇತ್ತೀಚಿನ ಚಹರೆ ಗೊತ್ತಾಯಿತು ಹಾಗೂ ಆತನ ತಲೆಗೆ ಸರ್ಕಾರ 1 ಕೋಟಿ ರು. ಇನಾಮು ಘೋಷಿಸಿತು.
ಮತ್ತಿಬ್ಬರು ಸಾವು:
ಮಂಗಳವಾರ ನಡೆದ ಚಕಮಕಿಯಲ್ಲಿ ಚಲಪತಿ ಸೇರಿ 14 ನಕ್ಸಲರು ಹತ್ಯೆಗೀಡಾಗಿದ್ದರು. ಇನ್ನೂ ಇಬ್ಬರು ನಕ್ಸಲರ ಸಾವಿನೊಂದಿಗೆ ಮೃತರ ಸಂಖ್ಯೆ ಬುಧವಾರ 16ಕ್ಕೇರಿದೆ.
ಜಾರ್ಖಂಡಲ್ಲಿ 2 ನಕ್ಸಲರ ಹತ್ಯೆ, ಒಬ್ಬ ನಕ್ಸಲ್ ಬಂಧನ
ಬೊಕಾರೊ: ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.ತಲೆಯ ಮೇಲೆ 15 ಲಕ್ಷ ರು. ಹೊತ್ತೊಯ್ಯುತ್ತಿದ್ದ ಮತ್ತೊಬ್ಬ ಮಾವೋವಾದಿಯನ್ನೂ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಬುಧವಾರ ಮುಂಜಾನೆ ಪೆಂಕ್ ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಹತ್ಯೆಯಾದವರನ್ನು ಶಾಂತಿದೇವಿ ಮತ್ತು ಮನೋಜ್ ತುಡು ಎಂದು ಗುರುತಿಸಲಾಗಿದೆ’ ಎಂದು ಡಿಜಿಪಿ ಅನುರಾಗ್ ಗುಪ್ತಾ ತಿಳಿಸಿದ್ದಾರೆ. ಈ ಮೂಲಕ ಜಾರ್ಖಂಡದಲ್ಲಿ ಶೇ.95ರಷ್ಟು ಮಾವೋ ಚಟುವಟಿಕೆಗಳು ಅಂತ್ಯವಾಗಿವೆ ಎಂದಿದ್ದಾರೆ.