ಮಹಾರಾಷ್ಟ್ರ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಮುಖ್ಯಮಂತ್ರಿ ಪಟ್ಟಕ್ಕೆ ಶಿವಸೇನೆ, ಬಿಜೆಪಿ ಕಸರತ್ತು

| Published : Nov 25 2024, 01:00 AM IST / Updated: Nov 25 2024, 04:45 AM IST

Devendra Fadnavis
ಮಹಾರಾಷ್ಟ್ರ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಮುಖ್ಯಮಂತ್ರಿ ಪಟ್ಟಕ್ಕೆ ಶಿವಸೇನೆ, ಬಿಜೆಪಿ ಕಸರತ್ತು
Share this Article
  • FB
  • TW
  • Linkdin
  • Email

ಸಾರಾಂಶ

ಮಹಾರಾಷ್ಟ್ರ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಿದ್ಧತೆ ಆರಂಭಿಸಿದೆ.

ಮುಂಬೈ: ಮಹಾರಾಷ್ಟ್ರ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಿದ್ಧತೆ ಆರಂಭಿಸಿದೆ. ಸೋಮವಾರ ಕೂಟದ ನಾಯಕ (ಮುಂದಿನ ಮುಖ್ಯಮಂತ್ರಿ) ಆಯ್ಕೆ ಆಗುವ ಸಾಧ್ಯತೆ ಇದ್ದು, ಸೋಮವಾರ ಅಥವಾ ಮಂಗಳವಾರ ಪ್ರಮಾಣವಚನ ಸ್ವೀಕಾರ ನಡೆವ ಸಂಭವವಿದೆ.

‘ಕೂಟವು ಮುಂದಿನ ಸಿಎಂ ಯಾರು ಎಂದು ಚುನಾವಣೆ ವೇಳೆ ಹೇಳಿರಲಿಲ್ಲ. ಹೀಗಾಗಿ ಹಾಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಇಬ್ಬರಲ್ಲಿ ಒಬ್ಬರು ಸಿಎಂ ಆಗುವ ಸಾಧ್ಯತೆ ಇದೆ. ಆದರೆ ಶಿಂಧೆ ಅವರು ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ನಡೆದಿದ್ದ 50:50 ಸೂತ್ರದಂತೆ ಮಹಾರಾಷ್ಟ್ರದಲ್ಲೂ 50:50 ಸೂತ್ರಕ್ಕೆ ಪಟ್ಟು ಹಿಡಿಯಬಹುದು. ಈ ಸೂತ್ರದ ಪ್ರಕಾರ 2.5 ವರ್ಷ ತಾವು ಸಿಎಂ ಆಗಬೇಕು, ನಂತರ ಫಡ್ನವೀಸ್‌ ಆಗಲಿ ಎಂದು ಬಿಜೆಪಿ ಹೈಕಮಾಂಡ್‌ಗೆ ತಿಳಿಸಲಿದ್ದಾರೆ. ತಮ್ಮ ನಾಯಕತ್ವದಲ್ಲಿ ಚುನಾವಣೆ ನಡೆದಿರುವ ಕಾರಣ ತಾವೇ ಸಿಎಂ ಆಗಬೇಕು ಎಂಬ ಭಾವನೆ ಅವರದು’ ಎಂದು ಮೂಲಗಳು ಹೇಳಿವೆ. 

ಅಜಿತ್‌ ಹಿಂದಕ್ಕೆ, ಫಡ್ನವೀಸ್‌ಗೆ ಬೆಂಬಲ?:

ಹಾಲಿ ಡಿಸಿಎಂ ಅಜಿತ್ ಪವಾರ್‌ಗೆ ಸಿಎಂ ಆಗುವ ಆಸೆ ಇದ್ದರೂ, ಅದು ಸದ್ಯಕ್ಕೆ ಅಸಾಧ್ಯ ಎಂಬ ಅರಿವಿರುವ ಕಾರಣ ಸುಮ್ಮನಿರಲು ನಿರ್ಧರಿಸಿದ್ದಾರೆ. ಅವರು ತಮ್ಮದೇ ಮರಾಠಾ ಜಾತಿಯ ನಾಯಕ ಶಿಂಧೆ ಅವರಿಗಿಂತ ಫಡ್ನವೀಸ್ ಜತೆ ಸಲುಗೆ ಹೊಂದಿದ್ದು, ಅವರೇ ಸಿಎಂ ಆಗಬೇಕು ಎಂದು ಬಯಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಇಂದು ಅಥವಾ ನಾಳೆ ಪ್ರಮಾಣ:

ಈ ನಡುವೆ, ಶಿವಸೇನೆ ಶಾಸಕಾಂಗ ನಾಯಕರಾಗಿ ಏಕನಾಥ ಶಿಂಧೆ ಹಾಗೂ ಎನ್‌ಸಿಪಿ (ಅಜಿತ್‌ ಬಣ) ಶಾಸಕಾಂಗ ನಾಯಕರಾಗಿ ಅಜಿತ್‌ ಪವಾರ್‌ ಭಾನುವಾರ ಆಯ್ಕೆ ಆದರು. ಇನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಚಂದ್ರಶೇಖರ ಬಾವನಕುಳೆ ಹಾಗೂ ವೇದಪ್ರಕಾಶ್‌ ಅವರು ಫಡ್ನವೀಸ್‌ ಭೇಟಿ ಮಾಡಿ ಸರ್ಕಾರ ರಚನೆ ಬಗ್ಗೆ ಚರ್ಚಿಸಿದರು.

ಈ ವಿದ್ಯಮಾನಗಳ ಬಗ್ಗೆ ಶಿವಸೇನೆ (ಶಿಂಧೆ ಬಣ) ಹಿರಿಯ ಶಾಸಕ ದೀಪಕ್‌ ಕೇಸರಕರ್‌ ಭಾನುವಾರ ಮಾತನಾಡಿ, ‘ಇಡೀ ಮಹಾಯುತಿ ಕೂಟದ ನೂತನ ನಾಯಕನ ಆಯ್ಕೆ (ಸಿಎಂ ಆಯ್ಕೆ) ಸೋಮವಾರ ನಡೆಯಲಿದ್ದು, ಅಂದೇ ಪ್ರಮಾಣವಚನ ಸ್ವೀಕಾರ ನಡೆಯುವ ನಿರೀಕ್ಷೆ ಇದೆ. ಕೇವಲ ನಾಯಕ (ಸಿಎಂ) ಹಾಗೂ ಉಪನಾಯಕ (ಡಿಸಿಎಂ) ಮಾತ್ರ ಈಗ ಪ್ರಮಾಣವಚನ ಸ್ವೀಕರಿಸಲಿದ್ದಾರೆ’ ಎಂದರು.

 ಆದರೆ ಇನ್ನೂ ಕೆಲವು ನಾಯಕರು ಮಾತನಾಡಿ, ‘ಸೋಮವಾರ ಕೂಟದ ಶಾಸಕಾಂಗ ಸಭೆ ಮಾತ್ರ ನಡೆಯಲಿದ್ದು, ಪ್ರಮಾಣ ವಚನ ಮಂಗಳವಾರ ನಡೆಯುವ ಸಾಧ್ಯತೆ ಇದೆ’ ಎಂದರು.

ರಾಜ್ಯದಲ್ಲಿ ಮಹಾಯುತಿ ಕೂಟದ ಅಂಗಪಕ್ಷಗಳಾದ ಬಿಜೆಪಿ 132, ಶಿವಸೇನೆ 57 ಹಾಗೂ ಎನ್‌ಸಿಪಿ (ಅಜಿತ್ ಬಣ) 41ರಲ್ಲಿ ಗೆದ್ದಿವೆ. ಈ ಮೂಲಕ, 288 ಸೀಟುಗಳ ಪೈಕಿ ಮಹಾಯುತಿ 230 ಸ್ಥಾನ ಸಂಪಾದಿಸಿದೆ.ರಾಜ್ಯ ವಿಧಾನಸಭೆ ಅವಧಿ ನ.26ಕ್ಕೆ ಮುಗಿಯಲಿದೆ. ಹೀಗಾಗಿ ನ.26ರೊಳಗೆ ಮುಖ್ಯಮಂತ್ರಿಯ ಪ್ರಮಾಣ ವಚನ ನಡೆಯಲೇಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಆಗುವವರೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕಾಗುತ್ತದೆ.

- ಫಡ್ನವೀಸ್‌, ಶಿಂಧೆ ಮಧ್ಯೆ ತೀವ್ರ ಪೈಪೋಟಿ । ಸಭೆಗಳ ಮೇಲೆ ಸಭೆ

- ಫಡ್ನವೀಸ್‌ಗೆ ಬೆಂಬಲ ವ್ಯಕ್ತಪಡಿಸಿ ಅಜಿತ್‌ ಪವಾರ್ ರೇಸಿಂದ ಔಟ್‌?

- 5 ವರ್ಷಗಳಿಗೆ ಕರ್ನಾಟಕ ಮಾದರಿ 50:50 ಸೂತ್ರಕ್ಕೆ ಶಿವಸೇನೆಯ ಏಕನಾಥ್‌ ಶಿಂಧೆ ಪಟ್ಟು ಹಿಡಿವ ಸಂಭವ

- ಅರ್ಧ ಅವಧಿಗೆ ನಾನು ಸಿಎಂ, ಇನ್ನರ್ಧ ಅವಧಿಗೆ ಫಡ್ನವೀಸ್‌ ಸಿಎಂ ಎಂದು ಶಿಂಧೆ ಪ್ರಸ್ತಾಪ? ಒಪ್ಪುತ್ತಾ ಬಿಜೆಪಿ?

- ಬಿಜೆಪಿ 132 ಸ್ಥಾನ, ಶಿವಸೇನೆ ಕೇವಲ 52 ಸ್ಥಾನ ಗೆದ್ದರೂ ಮೈತ್ರಿ ಧರ್ಮ ಪಾಲಿಸಬೇಕಾದ ಇಕ್ಕಟ್ಟಿನಲ್ಲಿ ಬಿಜೆಪಿ

- ನಾಳೆಯೇ ಹಳೆಯ ವಿಧಾನಸಭೆ ಅವಧಿ ಮುಕ್ತಾಯ: ಇಂದು ಅಥವಾ ನಾಳೆ ನೂತನ ಸರ್ಕಾರ ರಚನೆ ಅನಿವಾರ್ಯ

- ನಾಳೆಯೊಳಗೆ ಹೊಸ ಸಿಎಂ ಪದಗ್ರಹಣ ಮಾಡದಿದ್ದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು