ಸಾರಾಂಶ
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಬುಧವಾರ 80000 ಅಂಕಗಳ ಐತಿಹಾಸಿಕ ಮಟ್ಟ ತಲುಪಿ, ಬಳಿಕ 79,986 ಅಂಕಕ್ಕೆ ದಿನದ ವಹಿವಾಟು ಮುಗಿಸಿದೆ. ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕವಾದ ನಿಫ್ಟಿ ಸಾರ್ವಕಾಲಿಕ ದಾಖಲೆ ಮಟ್ಟವಾದ 24,286 ಅಂಕಗಳಲ್ಲಿ ಅಂತ್ಯವಾಗಿದೆ.
ಕಳೆದ ಕೆಲ ದಿನಗಳಿಂದ ಏರುಗತಿಯಲ್ಲೇ ಇರುವ ಸೆನ್ಸೆಕ್ಸ್ ಬುಧವಾರ ಮಧ್ಯಂತರದ ಅವಧಿಯಲ್ಲಿ 632 ಅಂಕಗಳ ಏರಿಕೆ ಕಂಡು 80,074 ಅಂಕಗಳನ್ನು ತಲುಪಿತ್ತು. ಇದು ಸೆನ್ಸೆಕ್ಸ್‌ನ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ.
ಆದರೆ ದಿನದಂತ್ಯಕ್ಕೆ ಸೂಚ್ಯಂಕ ಅಲ್ಪ ಇಳಿಕೆ ಕಂಡು 545 ಅಂಕಗಳ ಏರಿಕೆಯೊಂದಿಗೆ 79,986 ಅಂಕಗಳಲ್ಲಿ ಮುಕ್ತಾಯವಾಗಿದೆ.ಜೂ.4ರಂದು ಲೋಸಕಭಾ ಚುನಾವಣಾ ಫಲಿತಾಂಶ ಪ್ರಕಟವಾದ ದಿನ ಸೆನ್ಸೆಕ್ಸ್ 4,390 ಅಂಕಗಳ ಭಾರೀ ಕುಸಿತ ಕಂಡು 72079ರಲ್ಲಿ ಕೊನೆಗೊಂಡಿತ್ತು.
ಅದಾದ 21 ವಹಿವಾಟು ದಿನಗಳಲ್ಲಿ ಸೆನ್ಸೆಕ್ಸ್ ಭರ್ಜರಿ 8,000 ಅಂಕಗಳ ಏರಿಕೆ ಕಂಡು ಹೂಡಿಕೆದಾರರ ಸಂಪತ್ತನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ.ಈ ನಡುವೆ ನಿಫ್ಟಿ ಕೂಡಾ ಬುಧವಾರ 162 ಅಂಕಗಳ ಏರಿಕೆ ಕಂಡು 24286 ಅಂಕಗಳಲ್ಲಿ ಅಂತ್ಯವಾಗಿದೆ. ಮಧ್ಯಂತರ ಅವಧಿಯಲ್ಲಿ ನಿಫ್ಟಿ 183 ಅಂಕ ಏರಿ 24,307ರವರೆಗೂ ತಲುಪಿತ್ತಾದರೂ ದಿನದಂತ್ಯಕ್ಕೆ ಅಲ್ಪ ಇಳಿಕೆ ಕಂಡಿತು.ಬ್ಯಾಂಕಿಂಗ್, ಎಫ್‌ಎಂಸಿಜಿ ವಲಯದ ಷೇರುಗಳಿಗೆ ಕಂಡುಬಂದ ಭಾರೀ ಏರಿಕೆ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳ ಏರಿಕೆ ಕಾರಣವಾಯಿತು.