ಸಾರಾಂಶ
ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ 73 ಸಾವಿರ ಅಂಕಗಳ ಗಡಿ ದಾಟಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದ ದಾಖಲೆ ಬರೆದಿದೆ.
ಮುಂಬೈ: ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಸೋಮವಾರ 759 ಅಂಕಗಳ ಭಾರೀ ಏರಿಕೆ ಕಂಡು 73327 ಅಂಕಗಳಲ್ಲಿ ಮುಕ್ತಾಯವಾಗಿದೆ. ಸೆನ್ಸೆಕ್ಸ್ 73000 ಅಂಕಗಳ ಮೇಲೆ ಮುಕ್ತಾಯವಾಗಿದ್ದು ಇದೇ ಮೊದಲು.
ಇದೇ ವೇಳೆ ನಿಫ್ಟಿ ಕೂಡಾ 203 ಅಂಕ ಏರಿಕೆಯೊಂದಿಗೆ 22115 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದು ಕೂಡಾ ನಿಫ್ಟಿಯ ಗರಿಷ್ಠ ಮುಕ್ತಾಯ ಅಂಕವಾಗಿದೆ.
ಐಟಿ ವಲಯವು ಕಳೆದ ತ್ರೈಮಾಸಿಕದಲ್ಲಿ ನಿರೀಕ್ಷೆಗೆ ಮೀರಿ ಲಾಭ ಮಾಡಿರುವುದು, ಐಟಿ ಕಂಪನಿಗಳ ಷೇರು ಬೆಲೆ ಗಗನಕ್ಕೇರುವಂತೆ ಮಾಡಿದೆ. ಹೀಗಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೂಚ್ಯಂಕಗಳು ಕೂಡಾ ಐಟಿ ಬಲದಲ್ಲಿ ಸೋಮವಾರ ಭಾರೀ ಏರಿಕೆ ಕಂಡವು.
ಕಳೆದ 5 ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟಾರೆ 1972 ಅಂಕಗಳ ಏರಿಕೆ ಕಂಡಿದೆ. ಪರಿಣಾಮ ಹೂಡಿಕೆದಾರರ ಸಂಪತ್ತಿನಲ್ಲಿ 9.68 ಲಕ್ಷ ಕೋಟಿ ರು.ನಷ್ಟು ಹೆಚ್ಚಳವಾಗಿದೆ.