ಸಾರಾಂಶ
ಕೋಲ್ಕತಾ: ‘ಮಲಯಾಳಂ ಚಿತ್ರೋದ್ಯಮದಲ್ಲಿನ ಸೆಕ್ಸ್ ಹಗರಣ ರೀತಿಯ ಹಗರಣ ಬಂಗಾಳಿ ಚಿತ್ರರಂಗದಲ್ಲೂ ನಡೆದಿದೆ. ಇದಕ್ಕೆ ಸ್ವತಃ ನಾನೇ ಉದಾಹರಣೆ ಹಾಗೂ ನಾನೇ ಸಂತ್ರಸ್ತೆ’ ಎಂದು ನಟಿ ರಿತಾಭರಿ ಚಕ್ರವರ್ತಿ ಸ್ಫೋಟಕ ಆರೋಪ ಮಾಡಿದ್ದಾರೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ನಟಿ ರಿತಾಭರಿ ಅದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಲಗತ್ತಿಸಿದ್ದಾರೆ, ‘ಮಲಯಾಳಂ ಚಿತ್ರರಂಗದಲ್ಲಿನ ಲೈಂಗಿಕ ದೌರ್ಜನ್ಯದ ಕುರಿತು ನ್ಯಾ.ಹೇಮಾ ಸಮಿತಿ ವರದಿ ಬೆಳಕು ಚೆಲ್ಲಿದೆ. ಅದೇ ರೀತಿಯ ಪ್ರಸಂಗವನ್ನು ನಾನು ಮತ್ತು ಇತರ ನಟಿಯರು ಎದುರಿಸಿದ್ದೇವೆ. ಬಂಗಾಳ ಸರ್ಕಾರ ಕೂಡ ಕೂಡಾ ಇದೇ ರೀತಿಯ ತನಿಖೆ, ವರದಿ ಮತ್ತು ಸುಧಾರಣೆಗೆ ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.ರಿತಾಭರಿ ಯಾರ ಹೆಸರನ್ನು ಪ್ರಸ್ತಾಪ ಮಾಡದೇ ಇದ್ದರೂ, ‘ಹೀರೋಗಳು/ನಿರ್ಮಾಪಕರು/ ನಿರ್ದೇಶಕರು ತಮ್ಮ ಕೊಳಕು ಮನನ್ಸು ಮತ್ತು ವರ್ತನೆಯನ್ನು ಮುಂದುವರೆಸಿಕೊಂಡು ಯಾವುದೇ ಪರಿಣಾಮಗಳನ್ನು ಎದುರಿಸದೆಯೇ ತಮ್ಮ ಕೆಲಸ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಲೈಂಗಿಕ ಕಿರುಕುಳಕ್ಕೆಒಳಗಾದ ಇತರೆ ನಟಿಯರು ಕಿರುಕುಳ ನೀಡಿದವರ ಹೆಸರು ಬಹಿರಂಗಪಡಿಸುವ ಮೂಲಕ ಅವರ ಬಣ್ಣ ಬಯಲು ಮಾಡಬೇಕು’ ಎಂದಿದ್ದಾರೆ.
==ಸೆಕ್ಸ್ ಹಗರಣ: ಆರೋಪಿ ಪರ ಕೇಂದ್ರ ಸಚಿವ ಗೋಪಿ ಬ್ಯಾಟಿಂಗ್‌ತಿರುವನಂತಪುರ: ಮಲಯಾಳಂ ಚಿತ್ರರಂಗದಲ್ಲಿ ನಡೆದ ಸೆಕ್ಸ್ ಹಗರಣ ಇದೀಗ ಕೇರಳದ ಬಿಜೆಪಿ ಲೋಕಸಭಾ ಸದಸ್ಯ, ಕೇಂದ್ರ ಸಚಿವ ಸುರೇಶ್ ಗೋಪಿ ಮತ್ತು ಕೇರಳ ಬಿಜೆಪಿ ಘಟಕದ ನಡುವೆ ಜಟಾಪಟಿಗೆ ಕಾರಣವಾಗಿದೆ. ಪ್ರಕರಣದಲ್ಲಿ ಆರೋಪಿ ಆಗಿರುವ ಸಿಪಿಎಂ ಶಾಸಕ, ನಟ ಮುಕೇಶ್ ಪರ ಗೋಪಿ ಮಾತನಾಡಿರುವುದು ಇದಕ್ಕೆ ಕಾರಣ
ಮುಕೇಶ್ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಗೋಪಿ, ‘ಚಲನಚಿತ್ರ ಉದ್ಯಮದ ಕುರಿತ ಜನಾಭಿಪ್ರಾಯದ ಬಗ್ಗೆ ಮಾಧ್ಯಮಗಳು ದಿಕ್ಕು ತಪ್ಪಿಸುತ್ತಿವೆ. ಈಗ ಹೊರಿಸಲಾಗಿರುವುದು ಆರೋಪ. ಈ ಬಗ್ಗೆ ನ್ಯಾಯಾಲಯ ಕ್ರಮ ಕೈಗೊಳ್ಳುತ್ತದೆ. ಆದರೆ ನಿಮ್ಮ ಲಾಭಕ್ಕಾಗಿ ನೀವು ಜನರ ನಡುವೆ ಜಗಳ ತಂದಿಡುತ್ತಿದ್ದೀರಿ. ನೀವೇನು ನ್ಯಾಯಾಲಯವಾ?’ ಎಂದು ಮಾಧ್ಯಮಗಳ ವಿರುದ್ಧವೇ ಹರಿಹಾಯ್ದರು.ಆದರೆ ಸುರೇಶ್ ಹೇಳಿಕೆಯನ್ನು ತಳ್ಳಿಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್, ‘ಗೋಪಿ ಓರ್ವ ನಟನಾಗಿ, ಕೇಂದ್ರ ಸಚಿವರಾಗಿ ವೈಯಕ್ತಿಕ ಹೇಳಿಕೆ ನೀಡಲು ಹಕ್ಕು ಹೊಂದಿದ್ದಾರೆ. ಆದರೆ ಲೈಂಗಿಕ ಕಿರುಕುಳದ ಆರೋಪ ಹೊತ್ತ ಮುಕೇಶ್ ರಾಜೀನಾಮೆ ನೀಡಬೇಕು ಎಂಬುದು ಪಕ್ಷದ ನಿಲುವು’ ಎಂದು ಸ್ಪಷ್ಟಪಡಿಸಿದರು.