ಸಾರಾಂಶ
ಕೊಚ್ಚಿ: ಮಲಯಾಳಂ ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಹೇಳಿಕೆ ನೀಡಿದ ಆರೋಪದಲ್ಲಿ ಖ್ಯಾತ ಉದ್ಯಮಿ ಚೆಮ್ಮನೂರ್ ಜ್ಯುವೆಲ್ಸರ್ಸ್‌ನ ಮಾಲಕ ಬಾಬಿ ಚೆಮ್ಮನೂರ್ ಅವರನ್ನು ಬುಧವಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ವಶಕ್ಕೆ ಪಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಅಶ್ಲೀಲವಾಗಿ ಕಮೆಂಟ್ ಮಾಡಿದ ಚೆಮ್ಮನೂರು ಸೇರಿ 30 ಮಂದಿ ವಿರುದ್ಧ ನಟಿ ಹನಿ ಸಿಂಗ್ ಅವರು ಸೋಮವಾರ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಚೆಮ್ಮನೂರ್ ಅವರು ಆ್ಯಂಟಿಸಿಪೇಟರಿ ಬೇಲ್‌ಗೆ ಅರ್ಜಿ ಸಲ್ಲಿಸಲು ಪ್ರಯತ್ನ ನಡೆಸುತ್ತಿದ್ದರು. ಇದರ ನಡುವೆಯೇ ವಯನಾಡಿನ ಎಸ್ಟೇಟ್‌ನಲ್ಲೇ ಚೆಮ್ಮನೂರ್ ಅವರನ್ನು ವಶಕ್ಕೆ ಪಡೆದು, ಬಳಿಕ ಕೊಚ್ಚಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಚೆಮ್ಮನೂರ್ ನನ್ನ ವಿರುದ್ಧ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ್ದು ಇದೇ ಮೊದಲಲ್ಲ. ಕಣ್ಣೂರಲ್ಲಿ ಜ್ಯುವೆಲ್ಲರಿ ಶೋರೂಂ ಉದ್ಘಾಟನೆ ವೇಳೆಯೂ ನನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇನ್ನೊಂದು ಸಮಾರಂಭದಲ್ಲಿ ತನ್ನ ವಿರುದ್ಧ ಅಶ್ಲೀಲ ಹೇಳಿಕೆ ಕೊಟ್ಟಿದ್ದರು. ಕಾರ್ಯಕ್ರಮ ಹಾಳಾಗಬಾರದು ಎಂಬ ಕಾರಣಕ್ಕೆ ನಾನು ಆಗ ಪ್ರತಿಕ್ರಿಯೆ ಕೊಡದೆ ಸುಮ್ಮನಿದ್ದೆ ಎಂದು ಹನಿ ರೋಸ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ನಾನು ಆಘಾತಕಾರಿ ದಿನಗಳನ್ನು ನೋಡಿದ್ದೇನೆ. ಜತೆಗೆ ಖಿನ್ನತೆಯನ್ನೂ ಎದುರಿಸಿದ್ದೇನೆ. ಆತ(ಚೆಮ್ಮನೂರ್) ನನ್ನ ವಿರುದ್ಧ ಕೆಟ್ಟ ಅರ್ಥ ಬರುವ ರೀತಿಯಲ್ಲಿ ಅನೇಕ ಕಮೆಂಟ್‌ಗಳನ್ನು ಮಾಡಿದ್ದಾನೆ. ಪದೇ ಪದೆ ಈ ರೀತಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ಇಂಥವುಗಳಿಂದ ನಾವು ಖುಷಿಪಡುತ್ತಿದ್ದೇನೆ, ಅದಕ್ಕಾಗಿ ನಾನು ಮೌನವಾಗಿದ್ದೇನೆ ಎಂದು ಅವರೆಲ್ಲ ಭಾವಿಸಿದಂತಿತ್ತು. ನಾನು ಆ ಕಮೆಂಟ್‌ಗಳಿಗೆ ಮೊದಲೇ ಪ್ರತಿಕ್ರಿಯೆ ನೀಡಬೇಕಿತ್ತು ಎಂದು ಹನಿ ರೋಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ನೀವು(ಚೆಮ್ಮನೂರು) ಹಣ ಬಲದ ಮೇಲೆ ನಂಬಿಕೆ ಇಟ್ಟಿದ್ದರೆ, ನಾನು ದೇಶದ ಕಾನೂನು ವ್ಯವಸ್ಥೆ ಮೇಲೆ ವಿಶ್ವಾಸ ಇರಿಸಿದ್ದೇನೆ'''''''' ಎಂದು ಹೇಳಿಕೊಂಡಿದ್ದಾರೆ. ಚೆಮ್ಮನೂರು ಮಾತ್ರ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.