ಸಾರಾಂಶ
ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಈ ಭಾರೀ ಪ್ರಮಾಣದಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ಭಕ್ತರ ನಿರ್ವಹಣೆಯಲ್ಲಿ ದೇಗುಲ ಆಡಳಿತ ಮಂಡಳಿ ಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.ಪರಿಣಾಮ, ಕರ್ನಾಟಕ ಸೇರಿ ಹಲವು ರಾಜ್ಯಗಳ ಭಕ್ತರು ದೇವರ ದರ್ಶನ ಮಾಡದೇ ಮರಳುತ್ತಿರುವ ಘಟನೆಗಳು ವರದಿಯಾಗಿವೆ. ಮತ್ತೊಂದೆಡೆ ಅವ್ಯವಸ್ಥೆ ಪ್ರಶ್ನೆ ಮಾಡಿದ ಭಕ್ತರ ಮೇಲೆ ದೇಗುಲದ ಭದ್ರತಾ ಸಿಬ್ಬಂದಿ ಹಲ್ಲೆ ಮಾಡಿದ ಘಟನೆಗಳೂ ಕೂಡಾ ನಡೆದಿವೆ ಎನ್ನಲಾಗಿದೆ.ಅದರ ನಡುವೆಯೇ ನೀಲಕ್ಕಲ್‌ನಲ್ಲಿ ತಂದೆಯಿಂದ ತಪ್ಪಿಸಿಕೊಂಡ ಪುಟ್ಟ ಬಾಲಕನೊಬ್ಬ ವಾಹನದಲ್ಲಿ ತಂದೆಯನ್ನು ಹುಡುಕಿಕೊಡುವಂತೆ ಕಣ್ಣೀರೀಟ್ಟು ಕೈಮುಗಿದು ಬೇಡಿಕೊಳ್ಳುತ್ತಿರುವ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕ ಕಣ್ಣೀರಿಟ್ಟ ಕೆಲ ಹೊತ್ತಿನಲ್ಲೇ ಆತನ ತಂದೆ ವಾಹನದ ಬಳಿ ಪುತ್ರನನ್ನು ಸಂತೈಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.ಜೊತೆಗೆ ಈ ವಿಡಿಯೋ, ಯಾತ್ರೆ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿರುವುದಕ್ಕೆ ಸಾಕ್ಷಿ ಎಂದು ವಿಪಕ್ಷಗಳು ಕಿಡಿಕಾರಿವೆ. ಹೈಕೋರ್ಟ್ ಕೂಡಾ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.